ಕನ್ನಡಪ್ರಭ ವಾರ್ತೆ ರಾಮನಗರ
ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಶಿಸ್ತು ಮತ್ತು ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕೆಟಿಎಸ್‌ವಿ ಸಂಘದ ಗೌರವ ಅಧ್ಯಕ್ಷ ಎ.ಎಚ್.ಬಸವರಾಜು ಹೇಳಿದರು.ನಗರದ ಜಾನಪದ ಲೋಕದ ಆವರಣದಲ್ಲಿ ಶನಿವಾರ ರಾಜಾಜಿನಗರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬಿ.ಇಡಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಮುದಾಯಿಕ ಜೀವನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮುದಾಯಿಕ ಜೀವನ ಶಿಬಿರಗಳು ಶಿಕ್ಷಣಾರ್ಥಿಗಳ ಜೀವನದಲ್ಲಿ ಅವಿಸ್ಮರಣೀಯ ವಿಷಯಗಳನ್ನು ತಿಳಿಸಿಕೊಡುತ್ತವೆ. ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಣ ನೀಡಿದ ಶಿಕ್ಷಣ ಸಂಸ್ಥೆಗಳನ್ನು ಮರೆಯಬಾರದು. ಹಾಗೆಯೇ ಸಮಾಜದಲ್ಲಿ ಎಲ್ಲರೂ ಒಳ್ಳೆಯವರು ಅಲ್ಲ. ಎಲ್ಲರೂ ಕೆಟ್ಟವರೂ ಅಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಇವುಗಳನ್ನು ಅರಿತು ನಡೆಯಬೇಕು ಎಂದರು.ನಮ್ಮ ಕೆಟಿಎಸ್‌ವಿ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವರು ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬೇರೆ ರಾಜ್ಯದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಸವರಾಜು ತಿಳಿಸಿದರು.
ಶ್ರೀ ಕುವೆಂಪು ಮಹಾವಿದ್ಯಾಲಯದ ರಾಷ್ಟ್ರೀಯ ಯೋಜನಾ ಸಂಯೋಜನಾಧಿಕಾರಿ ಡಾ.ಎಚ್.ಎಲ್.ರವೀಂದ್ರ ಮಾತನಾಡಿ, ಹೆತ್ತ ತಾಯಿಯನ್ನು ನೋಡಿಕೊಳ್ಳಲು ಇಂದಿನ ಸಮಾಜ ಹಿಂದುಮುಂದು ನೋಡುವ ಸ್ಥಿತಿಗೆ ಬಂದು ತಲುಪಿದೆ. ಮನರಂಜನಾ ಮಾಧ್ಯಮವಾಗಿರುವ ಸಿನಿಮಾಗಳಲ್ಲಿ ನೈತಿಕತೆ ಕಡಿಮೆಯಾಗುತ್ತಿದೆ. ಈ ಹಿಂದಿನ ಸಿನಿಮಾಗಳು ಜೀವನಕ್ಕೆ ಬೇಕಾಗಿರುವ ಆದರ್ಶ ಯುಕ್ತ ಮೌಲ್ಯಗಳನ್ನು ತೋರಿಸುತ್ತಿದ್ದವು. ಆದರೆ,ಇಂದು ಮಾಧ್ಯಮಗಳಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಇದರ ದುಷ್ಪರಿಣಾಮ ಸಮಾಜದ ಎಲ್ಲ ವರ್ಗಗಳ ಮೇಲೆ ಬೀರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಮೂರು ತಲೆಮಾರುಗಳ ಹಿಂದೆ ಏನೇ ಲಭಿಸಿದರೂ ಹಂಚಿ ತಿನ್ನುವ ಭಾವನೆ ಇತ್ತು. ಆದರೆ ಇಂದು ಭಾವನಾತ್ಮಕ ಸಂಬಂಧ ಕಳೆದುಕೊಂಡಿರುವ ಮನುಷ್ಯನಲ್ಲಿ ಹಣ ಕೇಂದ್ರಿತ ಮನಸ್ಸುಗಳು ಹೆಚ್ಚಾಗುತ್ತಿವೆ. ಈ ಹಿಂದೆ ಸಣ್ಣ ಮಕ್ಕಳಿಗೆ ಅಜ್ಜಿ ಕಥೆ ಹೇಳಿ ಊಟ ಮಾಡಿಸುತ್ತಿದ್ದರು. ಪ್ರಸ್ತುತ ಈ ಸ್ಥಳಕ್ಕೆ ಮೊಬೈಲ್ ಬಂದಿದ್ದು, ನೈತಿಕ ಮೌಲ್ಯ ಕಳೆದುಕೊಳ್ಳಲು ಇದು ಕಾಣಿಕೆ ನೀಡುತ್ತಿದೆ ಎಂದು ಹೇಳಿದರು.
ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗಲಿದೆ. ಶಿಕ್ಷಕರ ಮೇಲೆ ಸಮಾಜ ನಿಂತಿದೆ. ಶಿಕ್ಷಕರು ವಿದ್ಯಾರ್ಥಿಗಳ ಶಾಪಕ್ಕೆ ಗುರಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಪ್ರಶಿಕ್ಷಣಾರ್ಥಿಳಿಗೆ ಬಹುಮಾನ ವಿತರಿಸಲಾಯಿತು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ನರೇಂದ್ರ, ಜಾನಪದ ಲೋಕದ ಕ್ಯೂರೇಟರ್ ಡಾ.ರವಿ, ಕಾಲೇಜಿನ ಪ್ರಾಂಶುಪಾಲ ಡಾ.ಶಿವರಾಮಯ್ಯ, ಉಪ ಪ್ರಾಂಶುಪಾಲ ಡಾ.ಸುರೇಶ್, ಸಮುದಾಯದ ಮುಖಂಡರಾದ ಕೆಂಪಣ್ಣ, ಜಗಣ್ಣ, ಮೂರ್ತಪ್ಪ, ಮುನಿರಾಜು, ರಾಘವೇಂದ್ರ, ಮಾರಪ್ಪ, ಭಾಸ್ಕರ್ ಉಪಸ್ಥಿತರಿದ್ದರು.