ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ,ಸಂಸ್ಕಾರ, ನೈತಿಕ ಶಿಕ್ಷಣ ಕಲಿಯಿರಿ: ಮರಿಯಾಲಶ್ರೀಗಳು

KannadaprabhaNewsNetwork |  
Published : Jan 22, 2026, 02:30 AM IST
ಶ್ರೀ ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೫-೨೬ ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೋಡುಗೆ ಕಾರ್ಯಕ್ರಮವ | Kannada Prabha

ಸಾರಾಂಶ

ಕಲಿಕಾ ಸಂದರ್ಭ ವಿದ್ಯಾರ್ಥಿಗಳು ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವ ಜೊತೆಗೆ ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ಮೀರಿ ಬೆಳೆಯಲು ಸಾಧ್ಯ. ಈಗ ನೀವೆಲ್ಲರೂ ಓದುವ ಕಾಲವಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ, ನೈತಿಕ ಶಿಕ್ಷಣ ಕಲಿಯುವ ಮೂಲಕ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಮರಿಯಾಲ ಮುರುಘ ರಾಜೇಂದ್ರಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀ ಇಮ್ಮಡಿ ಮುರುಘ ರಾಜೇಂದ್ರಸ್ವಾಮೀಜಿ ತಿಳಿಸಿದರು.

ನಗರ ಸಮೀಪದ ಶ್ರೀ ಮುರುಘ ರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೫- ೨೬ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕಾ ಸಂದರ್ಭ ವಿದ್ಯಾರ್ಥಿಗಳು ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವ ಜೊತೆಗೆ ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ಮೀರಿ ಬೆಳೆಯಲು ಸಾಧ್ಯ. ಈಗ ನೀವೆಲ್ಲರೂ ಓದುವ ಕಾಲವಾಗಿದೆ. ಈ ಅವಧಿಯಲ್ಲಿ ವಿದ್ಯಾಭ್ಯಾಸ ಕಡೆಗೆ ಮೊದಲ ಆದ್ಯತೆ ನೀಡಬೇಕು. ಈ ಹಂತದಲ್ಲಿ ಶ್ರದ್ಧೆ, ಆಸಕ್ತಿ ಮತ್ತು ಏಕಾಗ್ರತೆ ರೂಢಿಸಿಕೊಂಡರೆ, ಮುಂದಿನ ಜೀವನ ನಿಮ್ಮದಾಗುತ್ತದೆ. ಒಳ್ಳೆಯ ಫಲಿತಾಂಶ ಬರುತ್ತದೆ. ಸಾಧಿಸುವ ಛಲ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ತಂದೆ, ತಾಯಿ, ಗುರುಗಳು ಹಾಗೂ ವಿದ್ಯಾಸಂಸ್ಥೆಯ ಕೀರ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ. ಕುಮಾರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವು ಉತ್ತಮ ಫಲಿತಾಂಶ ಪಡೆಯುವುದರ ಜೊತೆಗೆ ಪ್ರತಿಭಾವಂತರಾಗಿ ಹೊರ ಬರುವ ಕಾಲ ಪಕ್ವವಾಗಿದೆ. ಪೋಷಕರ ಆಶಯವನ್ನು ಈಡೇರಿಸುವ ಮೂಲಕ ಉನ್ನತ ಸ್ಥಾನಗಳಿಗೆ ಹೋಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೨೦೨೩- ೨೪ ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ ೧೦೦ ಫಲಿತಾಂಶ ಬಂದಿದೆ. ೨೦೨೪-೨೫ ನೇ ಸಾಲಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೆ.ಪಿ ಪ್ರಭಾಮಣಿ ೬೦೦ ಕ್ಕೆ ೫೯೦ ಅಂಕ ಪಡೆದು ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಯಾಗಿದ್ದರು. ನಮ್ಮ ಕಾಲೇಜಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದರು. ಈ ಬಾರಿಯೂ ಸಹ ತಾವೆಲ್ಲರೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ. ೧೦೦ ರಷ್ಟು ಫಲಿತಾಂಶ ತಂದು ಕೊಡುತ್ತೀರಿ ಎಂಬ ವಿಶ್ವಾಸ ಇದೆ. ಇದಕ್ಕೆ ತಕ್ಕಂತೆ ಕಠಿಣ ಪರಿಶ್ರಮದಿಂದ ಓದಬೇಕು. ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಕಾಲೇಜು ಶಿಕ್ಷಣ ವಿಭಾಗ ಉಪನಿರ್ದೇಶಕರಾದ ಎಚ್. ಎನ್. ಪುಟ್ಟಗೌರಮ್ಮ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಆಶೋಕ್, ಸಂಸ್ಕೃತ ಪಾಠಶಾಲಾ ಮುಖ್ಯ ಶಿಕ್ಷಕ ಕೆ.ಜಿ. ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನುಶ್ರೀ, ಸ್ವಾಗತಿಸಿದರೆ, ಮಾನಸ ನಿರೂಪಿಸಿ, ಮಂಗಳ ವಂದನಾರ್ಪಣೆ ಮಾಡಿದರು. ಬಳಿಕ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲವೂ ನನ್ನದು ಎಂಬ ಭಾವನೆಯಿಂದ ಮಾತ್ರ ವಿಕಸಿತ ಭಾರತ ಸಾಧ್ಯ: ಎಂ. ಚಂದ್ರಶೇಖರಗೌಡ
ಕೊಲೆ ಶಂಕೆ: ಹೂತಿದ್ದ ಶವ ಹೊರತೆರೆದು ಪರೀಕ್ಷೆ!