ಬಸವರಾಜ ಹಿರೇಮಠ
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚು-ಕಡಿಮೆ ಬಡಾವಣೆಗೊಂದು ಉದ್ಯಾನವನಗಳಿದ್ದು, ಅವುಗಳ ನಿರ್ವಹಣೆ ಮಾತ್ರ ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯಾನವನಗಳ ನಿರ್ವಹಣೆಯನ್ನು ಕೆಲವು ಷರತ್ತಿಗೊಳಪಡಿಸಿ ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲು ಪಾಲಿಕೆ ತೀರ್ಮಾನಿಸಿದೆ.
ಆರ್ಥಿಕತೆ ಹಾಗೂ ತೋಟಗಾರಿಕೆ ವಿಭಾಗದ ಅಧಿಕಾರಿಗಳ ಕೊರತೆ ಹಿನ್ನೆಲೆಯಲ್ಲಿ ಉದ್ಯಾನವನಗಳ ನಿರ್ವಹಣೆ ಮಾಡಲು ಮಹಾನಗರ ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಹದಗೆಟ್ಟ ಉದ್ಯಾನವನಗಳ ನಿರ್ವಹಣೆಯಿಂದಾಗಿ ಪಾಲಿಕೆಗೆ ಸಾಕಷ್ಟು ಬಾರಿ ಮುಜುಗರವಾಗಿರುವ ಸಂಗತಿಗಳಾಗಿವೆ. ಜತೆಗೆ ಅವಳಿ ನಗರದಲ್ಲಿ ಇರುವ ಸಾವಿರಕ್ಕೂ ಹೆಚ್ಚು ಉದ್ಯಾನವನಗಳ ನಿರ್ವಹಣೆಗೆ ವಾರ್ಷಿಕ ₹ 3 ಕೋಟಿ ವೆಚ್ಚವಾಗುತ್ತಿದ್ದು, ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಕಳೆದ ತಿಂಗಳು ನಡೆದ ಸಾಮಾನ್ಯ ಸಭೆಯಲ್ಲಿ ಉದ್ಯಾನವನಗಳನ್ನು ಸಂಘ-ಸಂಸ್ಥೆಗಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.ನಿರ್ವಹಣೆ ಸಂಸ್ಥೆಯದ್ದು:
ಆಯಾ ಸಂಸ್ಥೆಯ ಪದಾಧಿಕಾರಿಗಳನ್ನು ಒಳಗೊಂಡು ಆಯಾ ವಾರ್ಡ್‌ನ ಪಾಲಿಕೆ ಸದಸ್ಯರು, ವಲಯ ಕಚೇರಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿ ಈ ಮೂಲಕ ಉದ್ಯಾನವನ ನಿರ್ವಹಿಸಲು ಯೋಜನೆ ಮಾಡಲಾಗುತ್ತಿದೆ. ಅಲ್ಲಿ ಸಸಿ ನೆಟ್ಟು ಅವುಗಳನ್ನು ಮಾರಾಟ ಮಾಡುವುದು ಹಾಗೂ ಇತರೆ ಲಾಭದಾಯಕ ಕಾರ್ಯಗಳ ಮೂಲಕ ಆಯಾ ಸಂಸ್ಥೆಗಳು ಈ ಉದ್ಯಾನವನ ನಿರ್ವಹಿಸಬಹುದು. ಆದರೆ, ಅಲ್ಲಿಯ ಭೌತಿಕ ಆಸ್ತಿ-ಪಾಸ್ತಿಗೆ ಯಾವುದೇ ಹಾನಿ ಮಾಡುವಂತಿಲ್ಲ ಎಂದು ಪಾಲಿಕೆ ವಲಯ ಕಚೇರಿ ಸಹಾಯಕ ಅಧಿಕಾರಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಹು-ಧಾ ಅವಳಿ ನಗರದಲ್ಲಿರುವ ಸಾಕಷ್ಟು ಸಂಖ್ಯೆಯ ಉದ್ಯಾನವನಗಳು ನಿರ್ವಹಣೆ ಇಲ್ಲದೇ ಹಾಳಾಗುತ್ತಿವೆ. ಉದ್ಯಾನವನ ನಮಗೆ ನೀಡಿದರೆ ಚೆನ್ನಾಗಿ ನಿರ್ವಹಿಸುತ್ತೇವೆಂದು ಹಲವು ವರ್ಷಗಳಿಂದ ಹಲವು ಬಡಾವಣೆಗಳ ಸಂಘ-ಸಂಸ್ಥೆಗಳು ಪಾಲಿಕೆಗೆ ಮನವಿ ಮಾಡಿದ್ದವು. ಆರ್ಥಿಕತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಪಾಲಿಕೆ ಸಂಘ-ಸಂಸ್ಥೆಗಳಿಗೆ ಉದ್ಯಾನವನ ನಿರ್ವಹಣೆ ನೀಡಲು ತೀರ್ಮಾನಿಸಿದ್ದು ಉತ್ತಮ ಬೆಳವಣಿಗೆ.