ವಿದ್ಯಾರ್ಥಿಗಳು ಸಾಧಿಸಬೇಕಾದ ಗುರಿಯ ಬಗ್ಗೆ ಮಾತ್ರ ಕನಸು ಕಾಣಬೇಕು: ಎ.ಆರ್. ಮುತ್ತಣ್ಣ

KannadaprabhaNewsNetwork | Published : Feb 11, 2025 12:47 AM

ಸಾರಾಂಶ

ವಿದ್ಯಾರ್ಥಿಗಳು ಸಾಧಿಸಬೇಕಾದ ಗುರಿಯ ಬಗ್ಗೆ ಮಾತ್ರ ಕನಸು ಕಾಣಬೇಕು. ಪ್ರತಿನಿತ್ಯ ಈ ಬಗ್ಗೆ ಮನನ ಮಾಡಿಕೊಳ್ಳಬೇಕು ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವಿದ್ಯಾರ್ಥಿಗಳು ಸಾಧಿಸಬೇಕಾದ ಗುರಿಯ ಬಗ್ಗೆ ಮಾತ್ರ ಕನಸು ಕಾಣಬೇಕು. ಪ್ರತಿನಿತ್ಯ ಆ ಬಗ್ಗೆ ಮನನ ಮಾಡಿಕೊಳ್ಳಬೇಕು. ವಿದ್ಯೆಯನ್ನು ಒಲಿಸಿಕೊಂಡರು ನಿಮ್ಮ ಕನಸು ನನಸಾದಂತೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅಭಿಪ್ರಾಯಿಸಿದರು.

ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿ.ಟಿ.ಸಿ.ಜಿ. ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಗೊಡುಗೆ ಹಾಗು ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇವೆ. ಕಳೆದ ಆರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಸತತವಾಗಿ ಶೇ.100 ರಷ್ಟು ಫಲಿತಾಂಶ ಶಾಲೆಗೆ ಸಿಕ್ಕಿದೆ. ದ್ವಿತೀಯ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ಕಲಿಕೆಯ ಕಡೆ ಗಮನಹರಿಸಬೇಕು. ತಾವುಗಳು ಓದಿದ ಸಂಸ್ಥೆ ಮತ್ತು ಗುರು ಹಿರಿಯರಿಗೆ ಸದಾ ಗೌರವ ಕೊಡಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆಯ ಭಾತ್ಮೀದಾರರಾದ ಕೆ.ಎಂ.ಜಗದೀಶ್ ಮಾತನಾಡಿ, ಮುಂದಿನ ವ್ಯಾಸಂಗಕ್ಕೆ ನಗರದ ಕಾಲೇಜುಗಳಿಗೆ ಸೇರಿದ ಮೇಲೆ, ಸಭ್ಯ ವಿದ್ಯಾರ್ಥಿಗಳ ಸಹವಾಸ ಮಾಡಬೇಕು. ದುಶ್ಚಟಕ್ಕೆ ಬಲಿಯಾದ ವಿದ್ಯಾರ್ಥಿಗಳಿಂದ ದೂರವಿರಬೇಕು. ಪೋಷಕರು ಮಕ್ಕಳ ಮೇಲೆ ದೊಡ್ಡ ಕನಸ್ಸು ಕಟ್ಟಿರುತ್ತಾರೆ. ಅವರ ತ್ಯಾಗಕ್ಕೆ ಮಕ್ಕಳು ಪ್ರತಿಫಲ ತಂದು ಕೊಡಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿ ಪುರಸ್ಕಾರವನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಇಮ್ರಾನ್ ಹಾಗು ವಾಣಿಜ್ಯ ವಿಭಾಗದ ಸೃಷ್ಟಿ ಪಡೆದುಕೊಂಡರು. ಕ್ರೀಡಾ ಕ್ಷೇತ್ರದ ಸಾಧಕರಾಗಿ ವಿಜ್ಞಾನ ವಿಭಾಗದ ಪುಷ್ಪಾಂಜಲಿ, ವಾಣಿಜ್ಯ ವಿಭಾಗದ ಕೀರ್ತನ್, ಅಮೂಲ್ಯ, ಖುಷಿ ಪಡೆದುಕೊಂಡರು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ನಂದಕುಮಾರ್, ಶ್ರೀಹರಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಇದ್ದರು.

Share this article