ಕುಷ್ಟಗಿ: ಪ್ರಾಥಮಿಕ ಹಂತದಲ್ಲಿ ಗಣಿತ, ಇಂಗ್ಲಿಷ್ ಭಾಷೆ ಮತ್ತು ತಂತ್ರಜ್ಞಾನದ ಪ್ರಭುತ್ವ ಶೈಕ್ಷಣಿಕ ಬದುಕಿನ ಯಶಸ್ಸಿಗೆ ನಿರ್ಣಾಯಕ ಎಂದು ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹೇಳಿದರು.
ಗಣಿತ,ಇಂಗ್ಲಿಷ್ ಭಾಷೆ ಮತ್ತು ತಂತ್ರಜ್ಞಾನ ಈ ಕಾಲಘಟ್ಟದ ಸಂಕೀರ್ಣ ವಿಷಯಗಳಿಗೆ ಬುನಾದಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಪ್ರಭುತ್ವ ಸಾಧಿಸಬೇಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಅಡಿ ಸರ್ಕಾರಿ ಉದ್ಯೋಗಗಳ ಅವಕಾಶ ಹೆಚ್ಚಾಗಿದೆ. ಆದರೆ ಗಣಿತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಇಲ್ಲದೆ ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಕೀಳರಿಮೆಯಿಂದ ಬಳಲುತ್ತಿದ್ದಾರೆ. ಇದು ನಿವಾರಣೆಯಾಗುವುದು ಈ ಭಾಗದ ಅಭಿವೃದ್ಧಿಗೆ ಅಗತ್ಯವಾಗಿದೆ. ಪಾಲಕರು, ಶಿಕ್ಷಕರು ಮತ್ತು ಶೈಕ್ಷಣಿಕ ಆಡಳಿತ ನಡುವಿನ ಉತ್ತಮ ಬಾಂಧವ್ಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ. ಇದನ್ನು ಉಳಿಸಿಕೊಂಡು ವಿದ್ಯಾರ್ಥಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಇರುವ ಸ್ಪರ್ಧೆಯ ಅರಿವನ್ನು ಮೂಡಿಸಬೇಕಾಗಿರುವುದು ಶಿಕ್ಷಕರ ಜವಾಬ್ದಾರಿ ಎಂದರು.
ಸಂಸ್ಥೆಯ ಅಧ್ಯಕ್ಷ ಸಿ.ವಿ.ಚಂದ್ರಶೇಖರ್ ಮಾತನಾಡಿ, ಕುಷ್ಟಗಿ ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್ ಸೌಲಭ್ಯ, ಹಾಸ್ಟೆಲ್ ಸೌಲಭ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಭಾಗದ ಮಕ್ಕಳು ಶ್ರೇಷ್ಠ ವೈದ್ಯ, ವಿಜ್ಞಾನಿ,ಇಂಜಿನಿಯರ್ ಗಳಾಗಿ ರೂಪುಗೊಳ್ಳಬೇಕೆಂಬುದು ನಮ್ಮ ಗುರಿ ಎಂದು ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಎಸ್.ವಿ.ಡಾಣಿ ಮಾತನಾಡಿ, ಜೀವನದಲ್ಲಿ ಹಣಕ್ಕಿಂತ ಶಿಕ್ಷಣ ಮುಖ್ಯ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಮೊಬೈಲ್ ಮತ್ತು ದೂರದರ್ಶನ ನೋಡುತ್ತಾ ಸಮಯ ಕಳೆಯುವ ಬದಲು ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಸಮಯ ಕಳೆದರೆ ಯಶಸ್ವಿ ನಾಗರಿಕರಾಗಿ ರೂಪುಗೊಳ್ಳುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದರೂ ಸಹ ಅರಿವಿನ ಕೊರತೆ ಯುವಕರಲ್ಲಿದೆ. ಅರಿವನ್ನು ಬೆಳೆಸಿಕೊಂಡಾಗ ಬದುಕು ಹಸನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಸಿಇಓ ಡಾ.ಜಗದೀಶ್ ಅಂಗಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದಿನಪತ್ರಿಕೆ ಮತ್ತು ಓದುವಿಕೆ ಪ್ರಚೋದಿಸಲು ಉಚಿತವಾಗಿ ಪುಸ್ತಕ ಮತ್ತು ದಿನಪತ್ರಿಕೆ ವಿತರಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಬದಲಾವಣೆ ತರುತ್ತಿರುವುದು ಸಂತಸ ಎಂದು ಹೇಳಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರಗೌಡ ಮಾಲಿಪಾಟೀಲ್ ಸಂಸ್ಥೆಯ ಬೆಳವಣಿಗೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ನಾಲ್ಕು ಸಂಸ್ಥೆಗಳ ಪ್ರಾಂಶುಪಾಲರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕೇಂದ್ರ ಪಠ್ಯಕ್ರಮ, ರಾಜ್ಯ ಪಠ್ಯಕ್ರಮ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.