ವಿದ್ಯಾರ್ಥಿಗಳಿಗೆ ಇರಲಿ ಪರಿಪೂರ್ಣ ವ್ಯಕ್ತಿತ್ವ: ಪ್ರೊ. ಎ.ಎಂ. ಖಾನ್

KannadaprabhaNewsNetwork |  
Published : Nov 10, 2026, 12:45 AM IST
ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಪೀಠದ ಸಭಾಂಗಣದಲ್ಲಿ ಆಯೋಜಿಸಿದ ಶಂಕರಪ್ಪ ಎಸ್ . ತೇಲಿ ಮತ್ತು ಪರೂತಗೌಡ ಚೆನ್ನಪ್ಪ ಗೌಡರ್ ದತ್ತಿ  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಎಲ್ಲ ಜ್ಞಾನ ಶಿಸ್ತುಗಳನ್ನು ಕಲಿಯುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಧಾರವಾಡ

ವಿದ್ಯಾರ್ಥಿಗಳು ಎಲ್ಲ ಜ್ಞಾನ ಶಿಸ್ತುಗಳನ್ನು ಕಲಿಯುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು‌ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಪೀಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶಂಕರಪ್ಪ ಎಸ್ . ತೇಲಿ ಮತ್ತು ಪರೂತಗೌಡ ಚೆನ್ನಪ್ಪ ಗೌಡರ್ ದತ್ತಿ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳಾದವರು ತಾವು ಆಯ್ದುಕೊಂಡ ಸ್ತಾತಕೋತ್ತರ ಪದವಿ ಪಠ್ಯವನ್ನು ಅಧ್ಯಯನ ಮಾಡುವ ಜತೆಗೆ ನಮ್ಮ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಎಲ್ಲ ವಿಷಯಗಳ ಜ್ಞಾನವನ್ನು ತಿಳಿದುಕೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಹಿರಿಯ ವಿದ್ವಾಂಸ ಪ್ರೊ. ಶಾಂತಿನಾಥ ದಿಬ್ಬದ ಮಾತನಾಡಿ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿ ಎರಡನ್ನೂ ಜತೆ ಜತೆಯಾಗಿ ಉಳಿಸಿಕೊಂಡು ಬಂದ ಶಿವಶರಣರ ತತ್ವಗಳು ಇಂದಿನ ವಿಜ್ಞಾನದ ಕಾಲದಲ್ಲೂ ಪ್ರಸ್ತುತವಾಗಿವೆ. ನಾವು ಎಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಅದರಲ್ಲಿರುವ ದೋಷಗಳನ್ನು ವಿರೋಧಿಸಬೇಕು ಎಂದ ಅವರು, ವಿರೋಧಿಸುತ್ತಲೇ ಅದರಲ್ಲಿರುವ ಒಳ್ಳೆತನ ಒಪ್ಪಿಕೊಳ್ಳಬೇಕು. ಅಂದಾಗ ಮಾತ್ರ ವ್ಯಕ್ತಿ ಮತ್ತು ಸಮಾಜದ ವಿಕಾಸ ಸಾಧ್ಯವಾಗುತ್ತದೆ. ಬಹುಮುಖ ಪ್ರತಿಭಾವಂತ ಶಿವಶರಣ ಅಂಬಿಗರ ಚೌಡಯ್ಯನವರ ಬದುಕು ಮತ್ತು ಆಲೋಚನೆಗಳು ಎಲ್ಲ ಕಾಲ ಮತ್ತು ಪ್ರದೇಶಗಳಿಗೂ ಮಾದರಿಯಾಗಿದೆ ಎಂದರು.

ಶಿವಶರಣರ ಕಾಲದಲ್ಲಿ ಬದುಕಿದ್ದ ಅಂಬಿಗರ ಚೌಡಯ್ಯ ಅವರ ಬದುಕು, ಬರಹ ಮತ್ತು ಚಿಂತನೆಗಳಲ್ಲಿರುವ ಮಹತ್ವದ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಸುಧಾ ಕೌಜಗೇರಿ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯ ಮಹಿಳಾ ಸಮಾನತೆ ದೃಷ್ಟಿಯಿಂದ ಮಹತ್ವದ ಘಟ್ಟವಾಗಿದೆ. ಅನೇಕ ಮಹಿಳೆಯರು ತಮ್ಮ ಪ್ರಯತ್ನ ಮತ್ತು ಪ್ರತಿಭೆಯ ಮೂಲಕ ಅಮೂಲ್ಯ ಸಾಹಿತ್ಯವನ್ನು ರಚಿಸಿದ ಬಗೆಯನ್ನು ವಿವರಿಸಿದರು.

ಕವಿವಿ ಕುಲಸಚಿವ ಡಾ. ಅರವಿಂದ ಕರಿಬಸನಗೌಡರ ಮಾತನಾಡಿ, ಹಿರಿಯರು ಮತ್ತು ವಿದ್ವಾಂಸರು ಹೇಳಿದ ಆಲೋಚನೆಗಳನ್ನು ಪಾಲಿಸಿದಾಗ ನಿಮ್ಮ ಬದುಕು ಸಮಾಜಕ್ಕೆ ಮಾದರಿಯಾಗುತ್ತದೆ ಎಂದು ಸಲಹೆ ನೀಡಿದರು.

ಬಸವೇಶ್ವರ ಪೀಠದ ಸಂಯೋಜಕರಾದ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಪ್ರಾಸ್ತಾವಿಕ ಮಾತನಾಡಿ, ಬಸವೇಶ್ವರ ಪೀಠವು ಕಳೆದ 56 ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನಗಳಿಲ್ಲದೆ ಕೇವಲ ದಾಸೋಹದ ಮೂಲಕ ವಿನೂತನ ಕಾರ್ಯಕ್ರಮ ಮೂಲಕ ಸಮಾಜದ ಜನರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ ಎಂದರು. ಜತೆಗೆ ಶರಣರ ಸಾಹಿತ್ಯದ ಚಿಂತನೆಗಳು ಯುವ ತಲೆಮಾರಿಗೆ ತಲುಪಲಿ ಎಂಬ ಉದ್ದೇಶದಿಂದ ದತ್ತಿದಾನಿಗಳನ್ನು ನೀಡಿದ ದಾಸೋಹಿಗಳನ್ನು ಸ್ಮರಿಸಿಕೊಂಡರು. ಬಸವ ಪೀಠದ ವಿದ್ಯಾರ್ಥಿಗಳು ಸಂಗೀತ ನಡೆಸಿಕೊಟ್ಟರು. ಕಲಾ ನಿಕಾಯದ ಡೀನರಾದ ಪ್ರೊ. ಪಾಟೀಲ್ ಸರ್, ಪ್ರೊ. ಕೃಷ್ಣ ನಾಯಕ, ಡಾ ನಿಂಗಪ್ಪ ಹಳ್ಳಿ , ಡಾ. ಹರಿಹರ್ ಇದ್ದರು. ಉಪನ್ಯಾಸಕರಾದ ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ವಿದ್ಯಾರ್ಥಿನಿ ಕುಮಾರಿ ಅನಿತಾ ಎಚ್. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಕಿನ ಹಬ್ಬ: ಲಕ್ಷ್ಮೀಪೂಜೆ, ಬಲಿಪಾಡ್ಯಮಿಗೆ ಎಲ್ಲೆಡೆ ಸಂಭ್ರಮ
ನ್ಯಾಯಾಂಗ ವ್ಯವಸ್ಥೆಗೆ ದಕ್ಷ ವಕೀಲರು ಅತ್ಯಗತ್ಯ