- ಮನೆ-ಮನೆಗಳಲ್ಲಿ ಲಕ್ಷ್ಮಿ ಪೂಜೆ, ಬೀದಿ-ಬೀದಿಗಳಲ್ಲಿ ದೀಪಗಳ ಅಲಂಕಾರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬೆಳಕಿನ ಚಿತ್ತಾರ, ಪಟಾಕಿಗಳ ಅಬ್ಬರ, ಸಿಹಿ ಹಂಚಿಕೆಯ ಸಂಭ್ರಮ... ಹೀಗೆ ಬೆಳಕಿನ ಹಬ್ಬ ದೀಪಾವಳಿಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ಜನರು ಸಡಗರ, ಸಂಭ್ರಮದಿಂದ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಮನೆ-ಮನೆಗಳಲ್ಲಿ ದೀಪಗಳ ಬೆಳಕು ಕಂಗೊಳಿಸಿದರೆ, ಪ್ರಮುಖ ರಸ್ತೆ, ವೃತ್ತಗಳು ಹಾಗೂ ಮಾರುಕಟ್ಟೆ ಪ್ರದೇಶಗಳು ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಕಳೆಗಟ್ಟಿದ್ದವು.ದೀಪಾವಳಿ ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೇ ಮನೆಗಳಲ್ಲಿ ಹಬ್ಬದ ಸಿದ್ಧತೆ ಜೋರಾಗಿತ್ತು. ಮಹಿಳೆಯರು ಮನೆಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ದೀಪಗಳನ್ನು ಜೋಡಿಸಿ ಸಂಭ್ರಮಕ್ಕೆ ಸಜ್ಜಾಗಿದ್ದರು. ಸಂಜೆ ಕತ್ತಲಾಗುತ್ತಿದ್ದಂತೆ ಮನೆಗಳ ಮುಂಭಾಗದಲ್ಲಿ ಸಾಲು ಸಾಲು ಹಣತೆಗಳು ಬೆಳಗಿದವು. ವಿದ್ಯುತ್ ದೀಪಗಳ ಅಲಂಕಾರದಿಂದ ಮನೆಗಳು ಝಗಮಗಿಸಿದವು. ಕುಟುಂಬದ ಸದಸ್ಯರು ಒಟ್ಟಾಗಿ ಲಕ್ಷ್ಮಿ ಪೂಜೆ ನೆರವೇರಿಸಿ, ಸಿಹಿ ಹಂಚಿಕೊಂಡು ಹಬ್ಬದ ಖುಷಿ ಅನುಭವಿಸಿದರು. ಮಕ್ಕಳು ಹಾಗೂ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ನಗರದ ದುರ್ಗದಬೈಲ್, ಜನತಾ ಬಜಾರ್, ರಾಣಿ ಚೆನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ಶಹಾ ಬಜಾರ್, ಗೋಕುಲ ರಸ್ತೆ, ಸರ್ವೋದಯ ವೃತ್ತ, ಗೋಪನಕೊಪ್ಪ, ಹಳೇ ಹುಬ್ಬಳ್ಳಿಯ ಸಂಡೆ ಮಾರ್ಕೆಟ್, ಇಂಡಿಪಂಪ್ ವೃತ್ತ, ಉಣಕಲ್ಲ ಕ್ರಾಸ್, ವಿದ್ಯಾನಗರ, ಶಿರೂರ ಪಾರ್ಕ್ ಹಾಗೂ ಸಿಬಿಟಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬಂದಿತು. ಪೂಜಾ ಸಾಮಗ್ರಿ, ಹೂವು, ಹಣ್ಣು, ಸಿಹಿ ತಿಂಡಿ, ಬಟ್ಟೆ ಹಾಗೂ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು. ಹೂವು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಹಬ್ಬದ ಸಂಭ್ರಮಕ್ಕೆ ಖರೀದಿ ಉತ್ಸಾಹ ಕಡಿಮೆಯಾಗಿರಲಿಲ್ಲ.
ಕಳೆದೊಂದು ವಾರದಿಂದಲೇ ನಗರದ ಮಾಲ್‌ಗಳು ಹಾಗೂ ಬಟ್ಟೆ ಅಂಗಡಿಗಳಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಿತ್ತು. ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸುವ ಸಂಪ್ರದಾಯದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಜನರು ಅಂಗಡಿಗಳಿಗೆ ಆಗಮಿಸಿ ಖರೀದಿಯಲ್ಲಿ ತೊಡಗಿರುವುದು ಸೋಮವಾರ ಕಂಡುಬಂದಿತು. ಒಟ್ಟಿನಲ್ಲಿ ಹಣತೆಗಳ ಬೆಳಕು, ಪಟಾಕಿಗಳ ಸದ್ದು, ಸಿಹಿ ತಿಂಡಿಗಳ ಸವಿ ಹಾಗೂ ಕುಟುಂಬದವರ ಒಗ್ಗೂಡುವಿಕೆಯೊಂದಿಗೆ ಹುಬ್ಬಳ್ಳಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿತ್ತು.