ಪಾಲಿಕೆಗೆ ಬಾಂಬ್ ಬೆದರಿಕೆ ಇ ಮೇಲ್: ಡಿಸಿಪಿಯಿಂದ ಪರಿಶೀಲನೆ

KannadaprabhaNewsNetwork |  
Published : Nov 10, 2026, 12:45 AM IST
ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಮೇಲ್‌ಗೆ ಬಂದಿರುವ ಬೆದರಿಕೆ ಸಂದೇಶ. | Kannada Prabha

ಸಾರಾಂಶ

ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿರುವುದು ಆತಂಕ ಮೂಡಿಸಿದೆ.

ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಸ್ಫೋಟದ ಬೆದರಿಕೆ ಇ-ಮೇಲ್ ಬಂದಿರುವುದು ಆತಂಕ ಮೂಡಿಸಿದೆ. ಇದರ ನಡುವೆ ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ ಸೇರಿದಂತೆ ಪೊಲೀಸರು ಪಾಲಿಕೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಸಂದೇಶದಲ್ಲಿ ಬೆಂಗಳೂರಿನ ವಿವಿಧೆಡೆ ಸ್ಫೋಟಿಸುವುದಾಗಿ ಉಲ್ಲೇಖಿಸಲಾಗಿದೆ.

ಸೋಮವಾರ ಬೆಳಗ್ಗೆ 11.35ರ ಸುಮಾರಿಗೆ ಪಾಲಿಕೆ ಆಯುಕ್ತರ ಇ-ಮೇಲ್‌ಗೆ "ವೆಯಿಟ್ ಸ್ಮಿತ್ " (Weit Smith) ಹೆಸರಿನಲ್ಲಿ ಬೆದರಿಕೆ ಸಂದೇಶ ಬಂದಿದೆ. ಖಲಿಸ್ತಾನ್ ಪರ ಘೋಷಣೆ ಹಾಗೂ 1984ರ ಸಿಖ್ ನರಮೇಧದ ಉಲ್ಲೇಖಗಳಿರುವ ಸಂದೇಶದಲ್ಲಿ, ಬೆಂಗಳೂರಿನಲ್ಲಿ ನ. 29ರಂದು ನಡೆಯಲಿರುವ ಗಾಯಕ ದಲ್ಜಿತ್ ದೋಸಾಂಜ್ ಅವರ ಕಾರ್ಯಕ್ರಮದ ಸ್ಥಳವಾದ ಎನ್‌ಐಸಿಇ ಸೆಂಟರ್ ಸ್ಟೇಜ್‌ನಲ್ಲಿ ಐಇಡಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ನ. 27ರಂದು ನಟ ಅಮಿತಾಬ್‌ ಬಚ್ಚನ್ ಅವರ ಮನೆ ಸಮೀಪ ಸ್ಫೋಟ ಸಂಭವಿಸಲಿದೆ ಎಂಬ ಉಲ್ಲೇಖವೂ ಸಂದೇಶದಲ್ಲಿದೆ. ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಸ್ಫೋಟಕ ಇರಿಸಿರುವುದಾಗಿ ಹೇಳಿ, ನವೆಂಬರ್ 29ರಂದು ಮೆಟ್ರೋದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದೆ. ಮಧ್ಯಾಹ್ನ 3.11ರಿಂದ ರಾತ್ರಿ 11.11ರ ವರೆಗಿನ ಸಮಯವನ್ನೂ ಪ್ರಸ್ತಾಪಿಸಲಾಗಿದೆ. ಎನ್‌ಐಸಿಇ ಮೈದಾನಕ್ಕೆ ತೆರಳದಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಅಪರಿಚಿತ ವಸ್ತುಗಳನ್ನು ಮುಟ್ಟದಂತೆ ಸೂಚಿಸಲಾಗಿದೆ. ಖಲಿಸ್ತಾನ್ ನ್ಯಾಷನಲ್ ಆರ್ಮಿ ಮತ್ತು ಬಬ್ಬರ್ ಖಾಲ್ಸಾ ಸಂಘಟನೆಗಳ ಹೆಸರನ್ನೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಡಿಸಿಪಿಯಿಂದ ಪರಿಶೀಲನೆ: ಬೆದರಿಕೆಯ ಇ-ಮೇಲ್ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶ್ರುತಿ ಅವರು ಮಹಾನಗರ ಪಾಲಿಕೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಯುಕ್ತರ ಕಚೇರಿಯ ಒಳಭಾಗ ಪರಿಶೀಲಿಸಿದ ಅವರು, ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದರು. ಬೆದರಿಕೆ ಸಂದೇಶದ ವಿವರ ಹಾಗೂ ಅದರ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಿದರು. ಇ-ಮೇಲ್‌ನ ಮೂಲ ಮತ್ತು ಸಂದೇಶ ರವಾನಿಸಿದವರ ಪತ್ತೆಗೆ ತನಿಖೆ ಮುಂದುವರಿದಿದೆ. ಇದೇ ವೇಳೆ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಶ್ವಾನದಳಗಳನ್ನು ಕರೆಯಿಸಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಏಳು- ಎಂಟು ಕಡೆಗೂ ಸಂದೇಶ: ಈ ಕುರಿತು ಪ್ರತಿಕ್ರಿಯಿಸಿರುವ ಮೇಯರ್ ದುರ್ಗಮ್ಮ ಬಿಜವಾಡ, "ಪೊಲೀಸ್ ಇಲಾಖೆಯವರು ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಏಳೆಂಟು ಕಡೆಗಳಲ್ಲಿ ಇಂತಹ ಸಂದೇಶಗಳು ಬಂದಿರುವ ಮಾಹಿತಿ ಲಭಿಸಿದೆ. ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಸುಳ್ಳು ಮಾಹಿತಿ ನೀಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಪ್ರಮುಖ ಸ್ಥಳಗಳಲ್ಲಿ ತಪಾಸಣೆ: ಪಾಲಿಕೆಗೆ ಬಂದಿರುವ ಬೆದರಿಕೆ ಇ- ಮೇಲ್ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಶ್ವಾನದಳ- ಬಾಂಬ್ ಪತ್ತೆ ದಳದಿಂದ ಪಾಲಿಕೆಯ ಎರಡೂ ಕಟ್ಟಡಗಳು ಮತ್ತು ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಭೂಷಣ್ ಬೊರಸೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ