- ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್ ಅಸಮಾಧಾನ ।
ರಾಜ್ಯ ಸರ್ಕಾರ ಹಾಲು, ಮೊಸರು ಹಾಗೂ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏಕಾಏಕಿ ಹೆಚ್ಚಿಸಿ ಜನ ಸಾಮಾನ್ಯರ ಮೇಲೆ ಭಾರಿ ಆರ್ಥಿಕ ಹೊರೆ ಹೊರಿಸಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಮುಖಂಡ ವಿಶ್ವನಾಥ್ ಗದ್ದೆಮನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ ದಿನನಿತ್ಯದ ಅಗತ್ಯವಾದ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹8 ರಷ್ಟು ಹೆಚ್ಚಿಸಿರುವುದು ಮತ್ತು ಮೊಸರಿನ ಬೆಲೆಯಲ್ಲಿ ಮಾಡಿರುವ ಗಣನೀಯ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಅನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ. ಇದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಸರಾಸರಿ ಶೇ. 23ರಷ್ಟು ಹಾಗೂ ಬೆಂಗಳೂರಿನ ಬಿಎಂಟಿಸಿ ದರವನ್ನು ಶೇ.32ರಿಂದ 35ರಷ್ಟು ಹೆಚ್ಚಿಸಲು ಹೊರಟಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದರು.ಗ್ರಾಮೀಣ ಜನತೆಗೆ ಹೊರೆ: ವಿಶೇಷವಾಗಿ ಮಲೆನಾಡು ಭಾಗದ ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕುಗಳ ಗ್ರಾಮೀಣ ಜನರು ಶಾಲೆ-ಕಾಲೇಜು ಶಿಕ್ಷಣ, ಆಸ್ಪತ್ರೆ ಹಾಗೂ ದಿನನಿತ್ಯದ ಉದ್ಯೋಗಕ್ಕೆ ಸಂಪೂರ್ಣವಾಗಿ ಸರ್ಕಾರಿ ಬಸ್‌ಗಳನ್ನೇ ನೆಚ್ಚಿ ಕೊಂಡಿದ್ದಾರೆ. ಬಸ್ ಪ್ರಯಾಣ ಐಷಾರಾಮಿ ಸೌಲಭ್ಯವಲ್ಲ; ಅದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳ ಜೀವನದ ಅವಿಭಾಜ್ಯ ಅಂಗ. ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟ ಸರಿದೂಗಿಸಲು ಪ್ರಯಾಣಿಕರ ಜೇಬಿಗೆ ಕನ್ನ ಹಾಕುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ ಏರಿಕೆ ಹಿಂಪಡೆಯಲು ಒತ್ತಾಯ: