ನೇಕಾರ ಸಮುದಾಯದ ತೊಗಟವೀರ, ದೇವಾಂಗ, ಕುರುಹಿನ ಶೆಟ್ಟಿ, ಪದ್ಮಶಾಲಿ ಪಟ್ಟಸಾಲಿ, ಶೆಟ್ಟರ್, ಜೇಡರ್, ಸಕುಳಸಾಲಿ ಸೇರಿದಂತೆ ಒಳಪಂಗಡಗಳ ಹತ್ತಕ್ಕೂ ಹೆಚ್ಚು ಜಾತಿ ಒಗ್ಗೂಡಿಸಿ ಒಕ್ಕೂಟವನ್ನು ರಚಿಸಿ ಸೋಮಶೇಖರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಘಟಿಸುತ್ತಿರುವುದು ಶ್ಲಾಘನೀಯ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನೇಕಾರ ಸಮುದಾಯದ ಬಂಧುಗಳು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮನವಿ ಮಾಡಿದರು.
ಪಟ್ಟಣದ ಹೊರವಲಯದ ನೇಕಾರ ತೊಗಟವೀರರ ಶ್ರೀಚೌಡೇಶ್ವರಿ ಸಮುದಾಯ ಭವನದಲ್ಲಿ ಮಂಡ್ಯ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟವು ಆಯೋಜಿಸಿದ್ದ ಸಂಘಟನಾ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ನೇಕಾರ ಸಮುದಾಯದ ತೊಗಟವೀರ, ದೇವಾಂಗ, ಕುರುಹಿನ ಶೆಟ್ಟಿ, ಪದ್ಮಶಾಲಿ ಪಟ್ಟಸಾಲಿ, ಶೆಟ್ಟರ್, ಜೇಡರ್, ಸಕುಳಸಾಲಿ ಸೇರಿದಂತೆ ಒಳಪಂಗಡಗಳ ಹತ್ತಕ್ಕೂ ಹೆಚ್ಚು ಜಾತಿ ಒಗ್ಗೂಡಿಸಿ ಒಕ್ಕೂಟವನ್ನು ರಚಿಸಿ ಸೋಮಶೇಖರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಸಂಘಟಿಸುತ್ತಿರುವುದು ಶ್ಲಾಘನೀಯ ಎಂದರು.
ಸಮುದಾಯದ ಬಂಧುಗಳು ತಮ್ಮ ವೃತ್ತಿ ಜೊತೆಗೆ ಶಿಕ್ಷಣದ ಮಹತ್ವದ ಬಗ್ಗೆ ಸಮಾಜದ ಬಂಧುಗಳಿಗೆ ಜಾಗೃತಿ ಮೂಡಿಸಿ ಪದವಿ ಸ್ನಾತಕೋತ್ತರ ಪದವಿ ಸೇರಿದಂತೆ ಉನ್ನತ ತಾಂತ್ರಿಕ ಶಿಕ್ಷಣ ಕೊಡಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, ಸಮುದಾಯದ ಬಂಧುಗಳನ್ನು ಸಂಘಟಿಸಿ ಜಾಗೃತಿ ಮೂಡಿಸಲು ಕಳೆದ ಹತ್ತು ವರ್ಷಗಳಿಂದ ನಿರಂತರ ಸೇವೆ ಜೊತೆಗೆ ನೇಕಾರಿಕೆ ಕಸುಬನ್ನು ಮಾಡುವ ಎಲ್ಲ ಜಾತಿಗಳು ಹಾಗೂ ಒಳಪಂಗಡಗಳ ಜನರನ್ನು ಒಗ್ಗೂಡಿಸಲು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ ಎಂದರು.
ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನೇಕಾರ ಭವನ ಸ್ಥಾಪಿಸುವ ಗುರಿಯನ್ನು ಸಂಘವು ಹೊಂದಿದೆ. ಭವನದ ನಿರ್ಮಾಣಕ್ಕೆ ಬೇಕಾದ ಅಗತ್ಯ ಸ್ಥಳವನ್ನು ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜವಳಿ ಸಚಿವರಿಗೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಮೂಲಕ ತಹಸೀಲ್ದಾರರಿಗೆ ನಿರ್ದೇಶನ ನೀಡಿ ನಿವೇಶನ ಒದಗಿಸುವಂತೆ, ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಗೌರವ ಕಾರ್ಯದರ್ಶಿ ಶಿವಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಉಪಾಧ್ಯಕ್ಷ ರಘು ಶೆಟ್ಟಿಗಾರ್, ರಾಜ್ಯ ಕಚೇರಿ ಕಾರ್ಯದರ್ಶಿ ದಯಾನಂದ ಶೆಟ್ಟಿಗಾರ್, ಜಿಲ್ಲಾ ಘಟಕದ ಅಧ್ಯಕ್ಷ ಹರಿಪ್ರಸಾದ್, ಕಾರ್ಯದರ್ಶಿ ಲೋಕೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಕನ್ಯಾ ರಂಗನಾಥ್, ರಾಜ್ಯ ಪಡಿತರ ವಿತರಕರ ಸಂಘದ ಉಪಾಧ್ಯಕ್ಷ ಅಂಚನಹಳ್ಳಿ ಸುಬ್ಬಣ್ಣ ಸೇರಿದಂತೆ ನೇಕಾರ ಉಪಜಾತಿಗಳ ನೂರಾರು ಮುಖಂಡರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.