ಕನ್ನಡಪ್ರಭ ವಾರ್ತೆ ಮಂಗಳೂರು:
ಉತ್ಸವದಲ್ಲಿ ಪ್ರತಿದಿನ 14 ಗಂಟೆಗೂ ಹೆಚ್ಚು ಕಾಲ ಎರಡು ವೇದಿಕೆಗಳಲ್ಲಿ ಏಕಕಾಲಕ್ಕೆ ಕಚೇರಿಗಳು ನಡೆಯಲಿವೆ. ಒಟ್ಟು 400 ಗಂಟೆಗೂ ಹೆಚ್ಚು ಕಾಲ ಸಂಗೀತ ಧಾರೆ ಹರಿಯಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ನಾಮ ಸಂಕೀರ್ತನೆ, ಹರಿಕಥೆ, ಭಜನೆ, ವಾದ್ಯ ಸಂಗೀತ, ಅಷ್ಟಪದಿ, ಕಥಕಳಿ, ಸೋಪಾನ ಸಂಗೀತ, ಷಹನಾಯಿ ಮತ್ತು ಡ್ರಮ್ಸ್ ಇರಲಿದೆ.
ಗೋಕುಲಂ ಗೋಶಾಲೆಯ ಸಂಸ್ಥಾಪಕ ವಿಷ್ಣುಪ್ರಸಾದ್ ಹೆಬ್ಬಾರ್ ರಚಿಸಿ, ವಿದ್ವಾನ್ ವೆಲ್ಲಿಕೋತ್ ವಿಷ್ಣು ಭಟ್ ಸಂಗೀತ ಸಂಯೋಜನೆ ಮಾಡಿದ 10ಕ್ಕೂ ಹೆಚ್ಚು ಭಜನೆಗಳನ್ನು ನಾಗರತ್ನಾ ಹೆಬ್ಬಾರ್ ಮತ್ತು ತಂಡ ಹಾಡುವ ಮೂಲಕ ಈ ವರ್ಷದ ದೀಪಾವಳಿ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.ವಿಶ್ವಪ್ರಸಿದ್ಧ ವಯಲಿನ್ ವಿದ್ವಾನ್ ಪದ್ಮವಿಭೂಷಣ ಎಲ್.ಸುಬ್ರಹ್ಮಣ್ಯಂ, ಪದ್ಮಭೂಷಣ ಟಿ.ಎನ್.ಶೇಷಗೋಪಾಲ್, ಪದ್ಮಭೂಷಣ ಟಿ.ವಿ.ಗೋಪಾಲಕೃಷ್ಣನ್ ಚೆನ್ನೈ, ಪದ್ಮಶ್ರೀ ಅರುಣಾ ಸಾಯಿರಾಂ, ಪದ್ಮಶ್ರೀ ಭಲ್ಲೇಶ್, ಮದ್ರಾಸ್ ಪಿ.ಉನ್ನಿಕೃಷ್ಣನ್, ಪದ್ಮಶ್ರೀ ಶಿವಮಣಿ, ಶಿವಶ್ರೀ ಸ್ಕಂದಪ್ರಸಾದ್, ಮೈಥಿಲಿ ಠಾಕೂರ್, ಖ್ಯಾತ ಚಿತ್ರರಂಗದ ಹಿನ್ನೆಲೆ ಗಾಯಕರಾದ ಮಾಳವಿಕಾ ಸುಂದರ್, ಸಿದ್ಧಾರ್ಥ್ ಬೆಳ್ಮಣ್ಣು ಸೇರಿದಂತೆ ಹಲವಾರು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.‘ಪರಂಪರಾ’ ಪರಿಕಲ್ಪನೆ:
ಈ ವರ್ಷದ ‘ಪರಂಪರಾ ವಿಭೂಷಣ’ ಪುರಸ್ಕಾರವನ್ನು ಖ್ಯಾತ ಕರ್ನಾಟಕ ಸಂಗೀತಗಾರ ಮಧುರೈ ಟಿ.ಎನ್. ಶೇಷಗೋಪಾಲ್ ಅವರಿಗೆ ನೀಡಲಾಗುತ್ತದೆ. ಪುರಸ್ಕಾರ 61,000 ರು.ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ. ‘ಪರಂಪರಾ ಭೂಷಣ’ ಪುರಸ್ಕಾರವನ್ನು ಕೇರಳದ ಖ್ಯಾತ ವಯಲಿನ್ ವಿದ್ವಾನ್ ನೆಡುಮಂಗಾಡ್ ಶಿವಾನಂದನ್ ಸ್ವೀಕರಿಸಲಿದ್ದು, 51,000 ರು. ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ. ‘ಪರಂಪರಾ ಶ್ರೀ’ ಪುರಸ್ಕಾರವನ್ನು ಕರ್ನಾಟಕದ ಖ್ಯಾತ ಮೃದಂಗ ವಿದ್ವಾನ್ ಆನೂರ್ ಅನಂತಕೃಷ್ಣ ಶರ್ಮರಿಗೆ ನೀಡಲಾಗುತ್ತದೆ. 41,000 ರು.ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ. ‘ಪರಂಪರಾ ಯುವ ಪ್ರತಿಭಾ’ ಪುರಸ್ಕಾರವನ್ನು ಬಿಹಾರದ ಶಾಸಕಿ ಮತ್ತು ಗಾಯಕಿ ಮೈಥಿಲಿ ಠಾಕೂರ್ ಅವರಿಗೆ ನೀಡಲಾಗುತ್ತದೆ. ‘ಪರಂಪರಾ ಬಾಲಪ್ರತಿಭಾ’ ಪುರಸ್ಕಾರವನ್ನು ವಯಲಿನ್‌ನಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಕುಮಾರಿ ಗಂಗಾ ಅವರಿಗೆ ನೀಡಲಾಗುತ್ತದೆ. ಇಬ್ಬರಿಗೂ 25,000 ರು. ನಗದು ಮತ್ತು ತಾಮ್ರ ಫಲಕ ಪ್ರದಾನ ಮಾಡಲಾಗುತ್ತದೆ.ಇಲ್ಲಿ ಗೋಶಾಲೆಯೇ ಕಲಾಶಾಲೆ:
ದೇಸೀ ಹಸು ಸಂರಕ್ಷಣೆಯ ಉದ್ದೇಶದಿಂದ 2010ರಲ್ಲಿ ವೆಚ್ಚೂರು ಹಸು ಮತ್ತು ಎತ್ತಿನೊಂದಿಗೆ ಆರಂಭವಾದ ಈ ಗೋಶಾಲೆ ಇಂದು ಸುಮಾರು 280 ದೇಸೀ ಹಸುಗಳಿಂದ ಸಮೃದ್ಧವಾಗಿದೆ. ವೆಚ್ಚೂರು, ಕಾಸರಗೋಡು ಕುಳ್ಳ, ಮಲನಾಡ್ ಗಿಡ್ಡ, ಹಳ್ಳಿಕಾರ್, ಗಿರ್, ಕಾಂಕ್ರೇಜ್, ಓಂಗೋಲ್, ಬರ್ಗೂರ್, ಕಾಂಗಯಂ ಎಂಬ ನಾಟೀ ತಳಿಗಳು ಇಲ್ಲಿ ಸಂರಕ್ಷಿಸಲ್ಪಡುತ್ತಿವೆ. ಸ್ವಚ್ಛತೆ ಮತ್ತು ಹಸುಗಳ ಆರೋಗ್ಯಕ್ಕೆ ಆದ್ಯತೆ ನೀಡುವ ಈ ಗೋಶಾಲೆಯಲ್ಲಿ ಹಾಲು ಮಾರಾಟ ಇಲ್ಲ. ಪಂಚಗವ್ಯದಿಂದ ಮೌಲ್ಯವರ್ಧಿತ ಉತ್ಪನ್ನಗಳು ಇಲ್ಲಿ ತಯಾರಾಗುತ್ತವೆ.