ಮುಂಡರಗಿ: ಪ್ರತಿ ಮಾತಿನೊಳಗೆ ಚುಟುಕು ಸಾಹಿತ್ಯ ಕಾಣಸಿಗುತ್ತವೆ. ಚುಟುಕು ಸಾಹಿತ್ಯವನ್ನು ಅರ್ಥಗರ್ಭಿತವಾಗಿ ರಚಿಸಿ ಜನರಿಗೆ ತಲುಪಿಸಬೇಕು. ವಿದ್ಯಾರ್ಥಿಗಳು ಚುಟುಕು ಸಾಹಿತ್ಯ ರಚನೆಗೆ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ಕವಿ ಶಂಕರ ಕುಕನೂರ ತಿಳಿಸಿದರು.
ಕಿರಿದಾದ ಸಾಲುಗಳಲ್ಲಿ ಹಿರಿದಾದ ಅರ್ಥವನ್ನು ಹೊಂದಿದ ಚುಟುಕುಗಳು ಚಾಟಿ ಏಟಿನಂತೆ ಸಮಾಜವನ್ನು ಎಚ್ಚರಿಸುತ್ತವೆ. ಕವಿಗೆ ಚುಟುಕು ರಚನೆ ಮಾಡುವುದಕ್ಕೆ ಯಾವುದೆ ರೀತಿಯ ನಿಗದಿತ ಸಮಯ, ಕಾಲವಿಲ್ಲ ಎಂದರು.ತಾಲೂಕು ಶಸಾಪ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸಪಾಟೀಲ ಮಾತನಾಡಿ, ಚುಟುಕು ಸಾಹಿತ್ಯ ಪ್ರಾಚೀನವಾದುದು. ಅದಕ್ಕೆ ಯಾವಾಗಲೂ ತನ್ನದೇ ಆದ ಬೇಡಿಕೆ ಇದೆ. ಪ್ರತಿಯೊಬ್ಬರಲ್ಲೂ ಸಾಹಿತ್ಯದ ಪ್ರತಿಭೆ ಇರುತ್ತದೆ. ಅದನ್ನು ಸತತ ಅಧ್ಯಯನ ಹಾಗೂ ಅನುಭವದಿಂದ ಹೊರತರುವಂತಾಗಬೇಕು. ಚುಟುಕು ಸಾಹಿತ್ಯ ಪ್ರಾಚೀನವಾದುದು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಇಂತಹ ಚಟುವಟಿಕೆಗಳ ಬಗ್ಗೆ ಒತ್ತು ನೀಡಬೇಕು ಎಂದರು.ಕಚುಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಶೋಭಾ ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಚುಟುಕು, ಕವಿತೆ ಬರೆಯುವುದಕ್ಕೆ ಆಸಕ್ತಿ ಹೊಂದಬೇಕು. ಬದುಕು, ಬರಹ ಒಂದಾಗಲು ಸಾಧ್ಯವಿಲ್ಲ. ಬದುಕಿದಂತೆ ಬರೆಯಬಹುದು. ಆದರೆ ಬರೆದಂತೆ ಬದುಕಲು ಸಾಧ್ಯವಿಲ್ಲ. ಜೀವನದಲ್ಲಿ ಧೈರ್ಯದಿಂದ ಮುನ್ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಕಸಾಪ ತಾಲೂಕಾಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣವರ ಮಾತನಾಡಿ, ಕನ್ನಡ ನಾಡು, ನುಡಿ, ಜಲದ ಬಗ್ಗೆ ಅಭಿಮಾನ ಹೊಂದಬೇಕು. ನಾವು ಎಲ್ಲೆ ಇದ್ದರೂ ಕನ್ನಡವನ್ನು ಮರೆಯದೆ ಕನ್ನಡವನ್ನು ಸದಾ ಬೆಳೆಸುವ ಕೆಲಸ ಮಾಡಬೇಕು ಎಂದರು.ಪ್ರಾಚಾರ್ಯ ಡಾ. ಸಂತೋಷ ಹಿರೇಮಠ ಮಾತನಾಡಿದರು. ಕಚುಸಾಪ ತಾಲೂಕಾಧ್ಯಕ್ಷ ಸಿ.ಎಸ್. ಅರಸನಾಳ ಆಶಯ ನುಡಿಗಳನ್ನಾದರು. ಚುಟುಕು ಕವಿಗೋಷ್ಠಿಯಲ್ಲಿ ಅತಿಥಿಗಳು ಸೇರಿದಂತೆ ಸಿ.ಎಸ್. ಅರಸನಾಳ, ಸಿ.ಕೆ. ಗಣಪ್ಪನವರ, ಸಂತೋಷ ಮುರಡಿ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ, ಸಚಿನ್ ಒಡೆಯರ್, ಗಿರಿಜಾ ಸೂಡಿ, ಡಾ. ಲಕ್ಷ್ಮಣ ಕುಲಕರ್ಣಿ, ಚಕ್ರವರ್ತಿ ಬಿಳಿಮಗ್ಗದ, ರಂಜಿತಾ, ವಿಜಯಲಕ್ಷ್ಮಿ ತಿಗರಿ, ಈರಮ್ಮ ಬಂಡಿವಡ್ಡರ, ನಿಂಗಮ್ಮ ವಾಲಿಕಾರ ಸೇರಿದಂತೆ ಅನೇಕರು ತಮ್ಮ ಸ್ವರಚಿತ ಚುಟುಕು ಕವಿತೆಯನ್ನು ವಾಚಿಸಿದರು.
ಚುಟುಕು ವಾಚಿಸಿದ ಎಲ್ಲ ಕವಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಸಂತೋಷ ಮುರಡಿ ಸ್ವಾಗತಿಸಿದರು. ಕಾಶೀನಾಥ ಬಿಳಿಮಗ್ಗದ ಹಾಗೂ ಸಚಿನ್ ಒಡೆಯರ್ ನಿರೂಪಿಸಿದರು. ಸಿ.ಕೆ. ಗಣ್ಣಪ್ಪನವರ ವಂದಿಸಿದರು.