ಕನಕಪುರ: ಪೋಷಕರು ಸರ್ವಸ್ವವನ್ನೂ ತ್ಯಾಗ ಮಾಡಿ ಮಕ್ಕಳಿಗೆ ಉತ್ತಮ ಜೀವನ ಕಟ್ಟಿಕೊಡಬೇಕೆಂದು ಕನಸು ಕಾಣುತ್ತಾರೆ. ವಿದ್ಯಾರ್ಥಿಗಳು ದುಶ್ಚಗಳಿಂದ ದೂರವಿದ್ದು, ಪೋಷಕರ ಕನಸು ನನಸು ಮಾಡುವ ಜೊತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ತಿಳಿಸಿದರು.
ಡಿವೈಎಸ್ಪಿ ಕೆ.ಸಿ.ಗಿರಿ ಮಾತನಾಡಿ, ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಗುರಿ ಸಾಧನೆ ಕಡೆಗೆ ಗಮನಹರಿಸಬೇಕು. ಪ್ರೀತಿ, ಪ್ರೇಮ, ದುಶ್ಚಗಳಿಗೆ ದಾಸರಾದರ ಭವಿಷ್ಯವೇ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರೂರಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎಸ್.ಕೆ.ಶ್ರೀಕಂಠು ಮಾತನಾಡಿ,ಸಮಾಜದಲ್ಲಿ ಡ್ರಗ್ಸ್ ಚಟಕ್ಕೆ ಬಿದ್ದು ಲಕ್ಷಾಂತರ ಯುವಕರು, ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಿದ್ಯಾರ್ಥಿಗಳು ಡ್ರಗ್ಸ್ ಸೇರಿದಂತೆ ಕೆಟ್ಟ ಚಟುವಟಿಕೆ ವಿರುದ್ಧ ಪ್ರತಿಜ್ಞೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಡಾ.ವಿನೋದ್ ಕುಮಾರ್ ಮಾದಕ ವ್ಯಸನ ಮತ್ತು ಡ್ರಗ್ಸ್ ಜಾಲ ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಜೀವನದಲ್ಲಿ ಕೆಟ್ಟ ಚಟಗಳಿಂದ ದೂರವಿರಬೇಕು. ಎಂತಹದೇ ಸಂದರ್ಭ ಬಂದರು ಅದರ ಪ್ರಭಾವಕ್ಕೆ ಒಳಗಾಗಬಾರದು. ತಮ್ಮ ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.ದೈಹಿಕ ಶಿಕ್ಷಣ ನಿರ್ದೇಶಕ ಕುಮಾರಸ್ವಾಮಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಗಳು ನಗರದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಜಾಥಾ ನಡೆಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಮಿಥುನ್ ಶಿಲ್ಪಿ, ವಿಕಾಸ್ ಗೌಡ, ಆರ್‌ಇಎಸ್ ಸಂಸ್ಥೆ ಕಾರ್ಯದರ್ಶಿ ಪುಟ್ಟಸ್ವಾಮಿ, ಜಂಟಿ ಕಾರ್ಯದರ್ಶಿ ಸೂರ್ಯನಾರಾಯಣಗೌಡ, ಖಜಾಂಚಿ ಮಂಜುನಾಥ್, ನಿರ್ದೇಶಕ ಕೆ.ಬಿ.ನಾಗರಾಜು, ಕೃಷಿ ವಿಶ್ವವಿದ್ಯಾಲಯದ ಟಿ.ಕೆ.ಸಿದ್ದರಾಮೇಗೌಡ, ಪುಟ್ಟರಾಜು, ಪ್ರಾಂಶುಪಾಲರಾದ ಎಂ.ಟಿ.ಬಾಲಕೃಷ್ಣ, ರುದ್ರೇಶ್, ಉಪ ಪ್ರಾಂಶುಪಾಲ ದೇವರಾಜು, ಪ್ರಾಧ್ಯಾಪಕರು, ನೌಕರರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 06:
ಕನಕಪುರ ರೂರಲ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹೆಚ್ಚವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಉದ್ಘಾಟಿಸಿದರು.