ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯೋಗದಲ್ಲಿ ಬಾಗಲಕೋಟೆ ಜಿಲ್ಲಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನ ಪ್ರಯುಕ್ತ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶಾಲಾ ಮಕ್ಕಳ ಮೂಲಕ ಜಾಥಾ ಹಮ್ಮಿಕೊಂಡು ಶಿಕ್ಷಣ ಸಂಸ್ಥೆಯ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ತಂಬಾಕು ಅಂಗಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಕೆಂಪು ಗುಲಾಬಿಯ ಜೊತೆಗೆ ತಂಬಾಕು ಮಾರಾಟಗಾರರಿಗೆ ಅದರ ದುಷ್ಪರಿಣಾಮಗಳು ಹಾಗೂ ತಂಬಾಕು ನಿಯಂತ್ರಣ ಕಾಯ್ದೆ 2003 (ಕೋಟ್ಪಾ) ಸೆಕ್ಷನ್ 6 (ಬಿ) ಕಾಯ್ದೆ ಅನುಸಾರ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕುರಿತು ಹಾಗೂ ತಂಬಾಕು ಸೇವನೆ ಮತ್ತು ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಜಾಗೃತಿ ಮೂಡಿಸಲಾಯಿತು.
ಗುಲಾಬಿ ಆಂದೋಲನವನ್ನು ಬೀಳಗಿ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಗಲಗಲಿಯಲ್ಲಿ ಜಿಲ್ಲಾ ಸಮೀಕ್ಷಣಾ ಘಟಕ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆನ್ನವರ ಕಾರ್ಯಕ್ರಮ ಉದ್ಘಾಟಿಸಿದರು.ನಗರದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಶಿವನಗೌಡ.ಸಿ ಪಾಟೀಲ, ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಠಳ್ಳಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ ಹೊಸಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಶಿನ್ನೂರ, ಸುಭಾಸ ಪಾಟೀಲ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.