ವಿದ್ಯಾರ್ಥಿಗಳೇ ಕೀಳರಿಮೆ ಬಿಡಿ ಸಾಧನೆಯತ್ತ ಗಮನ ಹರಿಸಿ: ಸಿ.ಪಿ.ರಾಜು

KannadaprabhaNewsNetwork |  
Published : May 21, 2026, 01:45 AM IST
20ಕೆಎಂಎನ್ ಡಿ24 | Kannada Prabha

ಸಾರಾಂಶ

ನಗರ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಪುಸ್ತಕವೇ ಅವರ ಪ್ರಪಂಚವಾಗಿರುತ್ತದೆ. ಆದರೆ, ಹಳ್ಳಿಗಾಡಿನಲ್ಲಿ ಓದಿದ ಮಕ್ಕಳಿಗೆ ಕಷ್ಟ ಸುಖಗಳ ಅರಿವಿನ ಜೊತೆಗೆ ಜಾಣತನ ಹೆಚ್ಚಿರುತ್ತದೆ. ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ್ದೇವೆ ಎಂಬ ಕೀಳರಿಮೆ ಬಿಟ್ಟು ಸಾಧನೆಯತ್ತ ಗಮನ ಹರಿಸಬೇಕು ಎಂದು ಮಳವಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಗರ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಪುಸ್ತಕವೇ ಅವರ ಪ್ರಪಂಚವಾಗಿರುತ್ತದೆ. ಆದರೆ, ಹಳ್ಳಿಗಾಡಿನಲ್ಲಿ ಓದಿದ ಮಕ್ಕಳಿಗೆ ಕಷ್ಟ ಸುಖಗಳ ಅರಿವಿನ ಜೊತೆಗೆ ಜಾಣತನ ಹೆಚ್ಚಿರುತ್ತದೆ. ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಹೆಚ್ಚು ಉನ್ನತ ಸರ್ಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಅರಿವು ನಿಮಗಿರಲಿ ಎಂದರು.

ಹಳ್ಳಿಗಾಡಿನ ಮಕ್ಕಳೇ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು. ಪ್ರಯತ್ನ ಸಫಲವಾಗದಿದ್ದಾಗ ಮಾತ್ರ ತಂದೆ ತಾಯಿ ಮಾಡಿರುವ ಆಸ್ತಿ, ವ್ಯವಸಾಯ, ವ್ಯಾಪಾರ ನಿಮ್ಮ ಕೊನೆ ಆಯ್ಕೆಯಾಗಬೇಕು. ಯಾವಾಗ ಸಮಾಜದ ಜೊತೆ ಒಡನಾಟ ಬೆಳೆಸಿಕೊಂಡು ಧೈರ್ಯವಾಗಿ ಮಾತನಾಡಲು ಕಲಿತಾಗ ನಿಮ್ಮ ಜೀವನಕ್ಕೆ ಒಂದು ರೂಪ ಬರುತ್ತದೆ ಎಂದರು.

ಕಾಂಗ್ರೆಸ್ ಯುವ ಮುಖಂಡ ಕುಂತೂರ್ ಗೋಪಾಲ್ ಮಾತನಾಡಿ, ಮೂರು ವರ್ಷಗಳ ಕಾಲ ವಿದ್ಯಾರ್ಥಿ ಜೀವನ ಪೂರೈಸಿ ಮುಂದಿನ ಜೀವನಕ್ಕೆ ಹೊಸ ಹೆಜ್ಜೆ ಇಡಲು ಹೋಗುತ್ತಿರುವ ನಿಮಗೆ ಶುಭವಾಗಲಿ. ಕ್ಷೇತ್ರದ ಶಾಸಕರಾದ ನರೇಂದ್ರಸ್ವಾಮಿ ಅವರು ಶಿಕ್ಷಣಕ್ಕಾಗಿ ದೂರ ದೃಷ್ಟಿಯಿಂದ ಒಳ್ಳೆಯ ಚಿಂತನೆಯಿಂದ ಹಲವು ಶಾಲಾ-ಕಾಲೇಜುಗಳ ಕಟ್ಟಡಗಳಿಗೆ ಕೊಠಡಿಗಳಿಗೆ

ಅನುದಾನ ನೀಡಿ ಕಂಪ್ಯೂಟರ್ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಎನ್ಎಸ್ಎಸ್ ಸಂಚಾಲಕ ಬಿ.ಸಿ.ರವಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಹಳ್ಳಿಗಾಡಿ ಜನರಿಗೆ ಭ್ರೂಣ ಹತ್ಯೆ ಹಾಗೂ ಬಾಲ ವಿವಾಹದ ಮತ್ತು ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕ್ರೀಡಾ ವಿಭಾಗದ ಸಂಚಾಲಕ ಡಾ.ಟಿ.ಶ್ರೀನಿವಾಸ್, ಕಾಲೇಜು ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಮಾತನಾಡಿದರು.

ಇದೇ ವೇಳೆ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಶಂಕರೇಗೌಡ, ಸುಧಾಬಿದರಿ, ಸೀಮಾ ಕೌಸರ್, ತಾರಾ ಜಯಲಕ್ಷ್ಮಿ, ಗುರುಪ್ರಸಾದ್, ಕುಮಾರಸ್ವಾಮಿ ಸೇರಿದಂತೆ ಕಾಲೇಜಿನ ಇತರ ಉಪನ್ಯಾಸಕರು ಉಪನ್ಯಾಸಕಿಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ: ಪಿ.ರವಿಕುಮಾರ್
ದಾಳಿಗೆ ಹೆದರಿ ಕಡತಗಳನ್ನು ಬಚ್ಚಿಟ್ಟ ಬೇಲೂರು ಗ್ರಾಪಂ ಅಧಿಕಾರಿಗಳು