ಬಾಲ್ಯ ವಿವಾಹದ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಅಗತ್ಯ: ತಹಸೀಲ್ದಾರ್ ಜೆ. ಸುರೇಂದ್ರಮೂರ್ತಿ ಕರೆ

KannadaprabhaNewsNetwork | Published : Jan 5, 2025 1:30 AM

ಸಾರಾಂಶ

ಪ್ರಜಾಸತ್ತಾತ್ಮಕ ಮೌಲ್ಯವನ್ನು ಅಳವಡಿಸಿಕೊಂಡು ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು, ನಾವೆಲ್ಲರೂ ಕೆಲಸ ಮಾಡುವುದು ನಮ್ಮ ಸಮಾಜಕ್ಕಾಗಿ. ಇದನ್ನು ಅರಿತು ಉತ್ತಮ ಸಮಾಜ ಕಟ್ಟಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಪೋಷಕರು ಯಾರದೋ ಒತ್ತಡಕ್ಕೆ ಮಣಿದು ಜಗತ್ತನ್ನೇ ಅರಿಯದ ಮುಗ್ಧ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡಿ ಅವಳ ಬಾಳನ್ನೇ ಅಂಧಕಾರದ ಕಡೆಗೆ ತಳ್ಳುತ್ತಿರುವುದು ಆರೋಗ್ಯವಂತ ಸಮಾಜಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡಬೇಕು ಎಂದು ತಹಸೀಲ್ದಾರ್ ಜೆ. ಸುರೇಂದ್ರಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಇಲಾಖೆ, ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಮಡಿಲು ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್.ಸಿ.ಎಸ್.ಪಿ. ಮತ್ತು ಟಿಎಸ್.ಪಿ. ಯೋಜನೆಯಡಿ ಬಾಲ ಮತ್ತು ಕಿಶೋರಿ ಕಾರ್ಮಿಕರ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಒಂದು ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ನೆರವೇರಿಸುವರು ಮತ್ತು ಪ್ರೋತ್ಸಾಹಿಸುವವರು ಅಪರಾಧಿಗಳಾಗಿದ್ದು, ಶಾರೀರಿಕ, ಮಾನಸಿಕವಾಗಿ ಬೆಳವಣಿಗೆಯಾಗದ ಯುವತಿಯರನ್ನು 18 ವರ್ಷದೊಳಗೆ ಮದುವೆ ಮಾಡುವುದರಿಂದ ರಕ್ತ ಹೀನತೆ, ಶಿಶುಮರಣ, ವಿಕಲಚೇತನ ಮಕ್ಕಳು, ವಯಸ್ಸಿಗೆ ಮೀರಿದ ಜವಾಬ್ದಾರಿ, ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ತಾಯಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್ ಮೂರ್ತಿ ಮಾತನಾಡಿ, ಪ್ರಜಾಸತ್ತಾತ್ಮಕ ಮೌಲ್ಯವನ್ನು ಅಳವಡಿಸಿಕೊಂಡು ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು, ನಾವೆಲ್ಲರೂ ಕೆಲಸ ಮಾಡುವುದು ನಮ್ಮ ಸಮಾಜಕ್ಕಾಗಿ. ಇದನ್ನು ಅರಿತು ಉತ್ತಮ ಸಮಾಜ ಕಟ್ಟಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕೆಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲೆ ಗಾಯಿತ್ರಿ ಮಾತನಾಡಿ, ಬಾಲ್ಯಾವಸ್ಥೆ ಮತ್ತು ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986, ತಿದ್ದುಪಡಿ 2016ರ ಹಾಗೂ ಬಾಲ್ಯ ವಿವಾಹದ ಬಗ್ಗೆ ಉಪನ್ಯಾಸ ನೀಡಿದರು.

ಬಳಿಕ ಇದೇ ಬಾಲ ಕಾರ್ಮಿಕ ಮತ್ತು ಕಿಶೋರಿ ಕಾರ್ಮಿಕರ ಪದ್ದತಿಯ ಬಗ್ಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು ಮೂನ್ನೂರು ಹೆಚ್ಚು ಬಾಲಕಿಯರು ಭಾಗವಹಿಸಿದ್ದರು.

ತಾಲೂಕು ಕಾರ್ಮಿಕ ನಿರೀಕ್ಷಕ ಗೋವಿಂದರಾಜು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್, ಮಡಿಲು ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಶ್ರೀನಿವಾಸ್, ಹಿರಿಯ ಉಪನ್ಯಾಸಕರ ಕುಮಾರ್, ಕಾರ್ಮಿಕ ಇಲಾಖೆಯ ಡಿಇಓ ಚಂದ್ರಕಾಂತ್, ಕ್ಷೇತ್ರ ಸಂಯೋಜಕ ರಾಮಚಂದ್ರು ಇದ್ದರು.

Share this article