ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಸಾರ್ವಜನಿಕರು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು 2025ರ ಹೊಸ ವರ್ಷವನ್ನು ಅತ್ಯಂತ ಸಂತಸ ಮತ್ತು ಸಂಭ್ರಮದಿಂದ ಬರಮಾಡಿಕೊಂಡರು.ಮಂಗಳವಾರ ತಡರಾತ್ರಿ 12ರ ವೇಳೆಗೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಬಾಡೂಟ ಸವಿಯುವ ಮೂಲಕ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ ಕೋರಿದರು.
ಬುಧವಾರ ಬೆಳಗ್ಗೆ ಬಣ್ಣ ಬಣ್ಣದ ಉಡುಪು ಧರಿಸಿ ಶಾಲಾ ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಶಾಲಾ ಕೊಠಡಿಗಳಲ್ಲಿ ಕೇಕ್ ಕತ್ತರಿಸಿ, ಕ್ಯಾಂಡಲ್ ಹಚ್ಚಿ ಹಸ್ತಲಾಘವದೊಂದಿಗೆ ಪರಸ್ಪರ ಶುಭಾಶಯ ಕೋರಿಕೊಂಡು ಹೊಸವರ್ಷದ ಸಂಭ್ರಮಾಚರಣೆ ಮಾಡಿದರು.ತಾಲೂಕಿನ ಚಿಣ್ಯ ಸರ್ಕಲ್ ಸಮೀಪದ ಭೂಸಮುದ್ರ ಗೇಟ್ ಬಳಿಯಿರುವ ವಿಬ್‌ಗಯಾರ್ ಪಬ್ಲಿಕ್ ಶಾಲೆಯ ಮಕ್ಕಳು ಶಾಲಾ ಆವರಣದಲ್ಲಿ ಕುಣಿದು ಕುಪ್ಪಳಿಸಿ, ತಮ್ಮ ಕೊಠಡಿಗಳಲ್ಲಿ ಕೇಕ್ ಕತ್ತರಿಸಿ ಹಂಚುವ ಜೊತೆಗೆ ಸಹಪಾಠಿಗಳಿಗೆ ಮತ್ತು ಶಿಕ್ಷಕರಿಗೆ ಶುಭಾಶಯ ಕೋರಿ ಆಶೀರ್ವಾದ ಪಡೆಯುವ ಮೂಲಕ ನೂತನ ವರ್ಷಕ್ಕೆ ಅದ್ಧೂರಿ ಸ್ವಾಗತ ಕೋರಿದರು.
ಪ್ರಕೃತಿ ಸೌಂದರ್ಯ ಕಣ್ತುಂಬಿಕೊಂಡ ಪ್ರವಾಸಿಗರುಮಳವಳ್ಳಿ:
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗಗನಚುಕ್ಕಿ ಜಲಪಾತ ಪ್ರವಾಸಿ ತಾಣಕ್ಕೆ ಬುಧವಾರ ಕೆಲ ಪ್ರವಾಸಿಗರು ಎಂದಿನಂತೆ ಬಂದು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.ವರ್ಷದ ಕೊನೆ ಹಾಗೂ ಪ್ರಾರಂಭದ ದಿನದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಸಂಭ್ರಮದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ಪ್ರವಾಸಿ ತಾಣಕ್ಕೆ ಸಾರ್ವಜನಿಕರು, ಪ್ರವಾಸಿಗರಿಗೆ ನಿಷೇಧ ಹೇರಿ ಅದೇಶ ಹೊರಡಿಸಿದ್ದರು.
ಆದರೆ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಪ್ರವಾಸಿಗರು ಗಗನಚುಕ್ಕಿ ಜಲಪಾತ ಬಳಿ ಆಗಮಿಸಿ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಮಾಡಿದರು.ಹಲವೆಡೆ ನಿಷೇಧ, ಪ್ರವಾಸಿಗರಿಗೆ ತೊಂದರೆ
ಪಾಂಡವಪುರದ ಕೆರೆ ತೊಣ್ಣೂರು ಕೆರೆ, ಕುಂತಿಬೆಟ್ಟ, ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟ ಸೇರಿದಂತೆ ತಾಲೂಕಿನ ಹಲವು ಬೆಟ್ಟದ ಪ್ರದೇಶಗಳಲ್ಲಿಯೂ ಹೊಸ ವರ್ಷದ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಯಾಗಿತ್ತು. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಲ್ಲಿ ನಿಷೇದಾಜ್ಞೆ ಇದ್ದ ಪರಿಣಾಮ ಪ್ರವಾಸಿಗರು ತೊಂದರೆಗೆ ಒಳಗಾಗಿ ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯ ಕಂಡು ಬಂತು.