ಕನ್ನಡಪ್ರಭ ವಾರ್ತೆ ರಾಮದುರ್ಗಎರಡು ತಿಂಗಳ ಬೇಸಿಗೆ ರಜೆ ಮುಗಿಸಿ ಶಾಲೆಗೆ ಬರುವ ಮಕ್ಕಳಿಗೆ ಹಬ್ಬವೋ ಹಬ್ಬ ಶೈಕ್ಷಣಿಕ ವರ್ಷಾರಂಭವನ್ನು ಶಿಕ್ಷಣ ಇಲಾಖೆ ಸಂಭ್ರಮದಿಂದ ಆಚರಿಸುತ್ತಿದೆ. ತಾಲೂಕಿನ ಕೆ.ಚಂದರಗಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಬರಲಾಯಿತು. ಮುತೈದಿಯರು ಕುಂಭಮೇಳದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಕೆ.ಚಂದರಗಿಯಲ್ಲಿ ಎತ್ತಿನಗಾಡಿಯಲ್ಲಿ ವಿದ್ಯಾರ್ಥಿಗಳನ್ನು ಕರೆ ತಂದರೆ, ಕರಡಿಗುಡ್ಡ ಮತ್ತು ಗೊಣ್ಣಾಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುತ್ತೈದೆಯರು ಕುಂಭಮೇಳದೊಂದಿಗೆ ಓಣಿಗಳಲ್ಲಿ ಮೆರವಣಿಗೆ ಮಾಡಿದರು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಅತಿಥಿಗಳನ್ನು ಸ್ವಾಗತಿಸಿದಂತೆ ಗುಲಾಬಿ ಹೂ ನೀಡಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಹಬ್ಬದೂಟ ಕೂಡ ಆಯೋಜನೆ ಮಾಡಲಾಗಿತ್ತು.
ನಂತರ ನಡೆದ ಪಾಲಕರ ಸಭೆಯಲ್ಲಿ ಬಿಇಒ ಆರ್.ಟಿ.ಬಳಿಗಾರ ಮಾತನಾಡಿ, ಈ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಆಚರಿಸಲಿದ್ದು ನೂರರಷ್ಟು ದಾಖಲಾತಿ ಮಾಡಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕು. ಅವರಿಗೆ ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು ಸಹಕಾರ ನೀಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಉಪನಿರ್ದೇಶಕರ ಕಚೇರಿಯ ಡಿವೈಪಿಸಿ ಬಿ.ಎಸ್.ಮಿಲಾನಟ್ಟಿ, ಶಿಕ್ಷಣ ಸಂಯೋಜಕ ಆನಂದತೀರ್ಥ ಜೋಶಿ, ಎಸ್‌ಡಿಎಂಸಿ ಅಧ್ಯಕ್ಷ ಗೊಣ್ಣಾಗರದ ಶ್ರೀಶೈಲ ಈರನಗೌಡ್ರ, ಗ್ರಾಪಂ ಸದಸ್ಯ ಎಚ್.ಬಿ.ಕುರಿ, ಸಿಆರ್‌ಪಿ ಬಿ.ಯು.ಬೈರಕದಾರ, ಐ.ಪಿ.ಮುಳ್ಳೂರ, ಎ.ಐ.ಅತ್ತಾರ, ಪ್ರಧಾನ ಗುರುಗಳಾದ ಎಸ್.ಎಚ್.ಶಿರಗುಂಪಿಮಠ, ಬಿ.ಎಚ್.ಸಿದ್ರಾಮಪ್ಪಗೋಳ, ಎ.ವೈ.ಅಪ್ಪಾಜಿಗೌಡ್ರ ಸೇರಿ ಹಲವರು ಹಾಜರಿದ್ದರು.