ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಕೇಳುವುದೇ ಮುಖ್ಯವಲ್ಲ, ಪಾಠದ ಜೊತೆಗೆ ತೌಲನಿಕ ಅಧ್ಯಯನ ಮಾಡಬೇಕು. ಸ್ಥಳೀಯ ಪ್ರದೇಶದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.
ಇಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಬುಧವಾರ ಆಯೋಜಿಸಿದ್ದ ಬಹುಮುಖಿ ಪ್ರಕಾಶನದ ‘ನೀವು ಕಂಡರಿಯದ ಕುದ್ಮಲ್ ರಂಗರಾವ್’ ಪುಸ್ತಕ ಕುರಿತ ಚರ್ಚೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುವೆಂಪು ವಿವಿಯಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಿಗಿಂತ ಹೆಚ್ಚು ಕಾರ್ಯಕ್ರಮಗಳು ಸಹ್ಯಾದ್ರಿ ಕಾಲೇಜಿನಲ್ಲಿಯೇ ನಡೆಯುತ್ತಿರುವುದು ಶ್ಲಾಘನೀಯ. ಸಹ್ಯಾದ್ರಿ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳ ತವರೂರು ಎಂದರು.ಕುದ್ಮಲ್ ರಂಗರಾವ್ ಪುಸ್ತಕ ಕುರಿತು ವಿಶೇಷ ಉಪನ್ಯಾಸ ನೀಡಿದ ಚಿಂತಕ ಹಾಗೂ ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಕುದ್ಮಲ್ ರಂಗರಾವ್ ಅವರು ಸಾಮಾಜಿಕ ಸುಧಾಕರು. ಒಂದು ಗೌರವ ಸಮಾಜದಿಂದ ಬಂದ ಅವರು ಕೆಳಸಮಾಜದ ಬಗ್ಗೆ ಯೋಚಿಸುವುದು ಈ ನೆಲದ ಶಕ್ತಿಯಾಗಿದೆ. ಅವರು ಚಿತ್ತಾರ ಸಾರಸತ್ವ ಬ್ರಾಹ್ಮಣ ಸಮಾಜದಿಂದ ಬಂದವರಾದರೂ ದಲಿತ ಪ್ರಜ್ಞೆಯನ್ನು ಬೆಳೆಸಿಕೊಂಡವರು. ಅವರ ಕಾಲದಲ್ಲಿನ ಹಿಂದೂ ಧರ್ಮದ ಮೌಢ್ಯಗಳನ್ನು ತೊರೆಯಲು ಹೋರಾಟ ಮಾಡಿದವರು. ಗಾಂಧಿ ಮತ್ತು ಅಂಬೇಡ್ಕರ್ ಸಾಲಿನಲ್ಲಿ ನಿಲ್ಲುವ ಅವರು ಅವರಿಗಿಂತ ಮೊದಲೇ ಸಮಾನತೆ ಸಮಾಜದ ಬಗ್ಗೆ ಯೋಚಿಸಿದವರು ಎಂದು ತಿಳಿಸಿದರು.ಜಾತ್ಯತೀತ ಎನ್ನುವುದು ವಿದೇಶದಿಂದ ಬಂದಿದ್ದು ಅಲ್ಲ. ಇದು ಈ ನೆಲದಿಂದ ಹುಟ್ಟಿದ್ದು. ಒಡೆದಾಳುವ ಮಾತು ಬಿಟ್ಟು ಒಂದಾಗುವ ಮಾತುಗಳು ಒಬ್ಬ ವ್ಯಕ್ತಿಯ ಶ್ರೇಷ್ಠತೆ ಬೆಳೆಸುತ್ತದೆ. ಜಾತೀಯತೆಯ ಕೆಡಕುಗಳನ್ನು ದೂರ ಮಾಡಲು ರಂಗರಾವ್ ಬಂಡಾಯವನ್ನೇ ಸಾರಬೇಕಾಯಿತು. ದಲಿತರಿಗೆ ಶಿಕ್ಷಣ ನೀಡಿದ್ದಕ್ಕೆ ಅವಮಾನಗಳನ್ನು ಅವರು ಎದುರಿಸಬೇಕಾಯಿತು. ಇಂತಹ ವ್ಯಕ್ತಿಗಳ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಸಿರಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಪಿ.ಚಂದ್ರಿಕಾ, ಸಂಚಾಲಕ ಶಂಕರ್ ಸಿಹಿಮೊಗೆ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ನಂತರ ನಡೆದ ಸಂವಾದ ಗೋಷ್ಠಿಯಲ್ಲಿ ಡಾ.ಮಹಾದೇವಸ್ವಾಮಿ, ಡಾ.ಪ್ರಸನ್ನಕುಮಾರ್, ಡಾ.ಎಂ.ಎಚ್.ಪ್ರಹ್ಲಾದಪ್ಪ ಇದ್ದರು. ವಿದ್ಯಾರ್ಥಿಗಳು ಪುಸ್ತಕಗಳ ಕುರಿತು ಪ್ರಬಂಧ ಮಂಡಿಸಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಪ್ರಣತಿ ಪ್ರಾರ್ಥಿಸಿದರು, ಸಿಂಚನಾ ನಿರೂಪಿಸಿದರು.