ಯಲ್ಲಾಪುರ: ಬುದ್ಧಿ ಚಂಚಲವಾದದ್ದು, ಅದನ್ನು ನಿಯಂತ್ರಿಸುವುದು ತೀರಾ ಕಷ್ಟ. ಹಾಗಾಗಿಯೇ ನಮ್ಮ ಋಷಿ ಮುನಿಗಳು ಯೋಗವನ್ನು ನೀಡಿದ್ದಾರೆ. ನಮ್ಮ ಬುದ್ಧಿಯ ನಿಯಂತ್ರಣವನ್ನು ಯೋಗ, ಪ್ರಾಣಾಯಾಮ, ಧ್ಯಾನದಿಂದ ನಿಯಂತ್ರಿಸಬಹುದು ಜತೆಗೆ ಪುಸ್ತಕ ಅಧ್ಯಯನವೂ ಬುದ್ಧಿಯ ಚಂಚಲತೆ ನಿವಾರಿಸುತ್ತದೆ ಎಂದು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಡೀಮ್ಡ್ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ಟ ಬಾಲಿಗದ್ದೆ ತಿಳಿಸಿದರು.
ಶನಿವಾರ ತಾಲೂಕಿನ ಉಮ್ಮಚಗಿಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ನೂತನವಾಗಿ ನಿರ್ಮಿಸಿದ ಜ್ಯೋತಿಷ್ಮತಿ ಗ್ರಂಥನಿಕೇತನ(ಗ್ರಂಥಾಲಯ) ಹಾಗೂ ಯುಗಾದಿಯಿಂದ ಯುಗಾದಿವರೆಗಿನ ನಿತ್ಯಪ್ರಭಾ ದಿನದರ್ಶಿಕೆ ಮತ್ತು ಸುಮೇರು ಪ್ರಕಾಶನ ಹೊರತಂದ ನರೇಂದ್ರ ಜೋಶಿ ಸಂಪಾದಿಸಿದ ಸ್ತೋತ್ರ ಮುಕ್ತಿಮಾಲ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಪುಸ್ತಕ ಸ್ಥಿರವಾದದ್ದು, ಮನಸ್ಸು ಅಷ್ಟೇ ಚಂಚಲವಾದದ್ದು. ಅಂತಹ ಮನಸ್ಸನ್ನು ಜ್ಞಾನ ಸಂಪಾದನೆಗೋಸ್ಕರ ಉತ್ತಮ ಗ್ರಂಥ ಅಧ್ಯಯನ ಮಾಡಬೇಕು. ಗ್ರಂಥ ಜ್ಞಾನ, ದೀಪದ ಸಂಕೇತ. ಇಂದು ಪುಸ್ತಕ ಅಧ್ಯಯನ ಬಿಟ್ಟು ಜಂಗಮವಾಣಿಯ ಅಧ್ಯಯನಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿರುವುದು ಭವಿಷ್ಯತ್ತಿನಲ್ಲಿ ಶ್ರೇಯಸ್ಸು ನೀಡದು ಎಂದರು.ಹಣವೇ ಪ್ರಧಾನವಾಗಿ ಭೋಗಕ್ಕೆ ಮಹತ್ವ ನೀಡುತ್ತಿದ್ದೇವೆ. ಅದರಿಂದ ಶ್ರೇಯಸ್ಸು ಅಸಾಧ್ಯ. ಭಾರತ ಭಾರತವಾಗಿ ಉಳಿಯಬೇಕಾದರೆ ನಮ್ಮ ಕುಟುಂಬ ವ್ಯವಸ್ಥೆ ನಮಗೆ ಸಂಸ್ಕಾರ ನೀಡಬೇಕು. ಇದು ಸನಾತನ ಧರ್ಮದ ಆಚರಣೆಯಿಂದ ಮಾತ್ರ ಸಾಧ್ಯ. ನಮಗೆ ರಾಷ್ಟ್ರ ಮೊದಲು ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಜ್ಯೋತಿಷ್ಯಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಲು ಇಂತಹ ಗ್ರಂಥಾಲಯ ಅಗತ್ಯ. ಆ ದೃಷ್ಟಿಯಲ್ಲಿ ನಾಗೇಶ ಭಟ್ಟ ಅವರ ಶ್ರಮ ಸಾರ್ಥಕವಾದದ್ದು ಎಂದರು.
ಈ ಸಂದರ್ಭದಲ್ಲಿ ಪ್ರಸಿದ್ಧ ಜ್ಯೋತಿಷಿಗಳಾದ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಕುಮಟಾದ ಗೋಪಾಲಕೃಷ್ಣ ಹೆಗಡೆ, ಉಮ್ಮಚಗಿಯ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ನಾಗೇಶ ಭಟ್ಟ, ಲಕ್ಷ್ಮೀನಾರಾಯಣ ಭಟ್ಟ ತುಂಬೆಬೀಡು ಇದ್ದರು.ಜ್ಯೋತಿರ್ವನದ ಸಂಚಾಲಕ ಡಾ. ಕೆ.ಸಿ. ನಾಗೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರವೀಂದ್ರ ಸೂರಿ ನಿರೂಪಿಸಿದರು. ನರೇಂದ್ರ ಜೋಶಿ ವಂದಿಸಿದರು.ದಾಂಡೇಲಿ ತಾಲೂಕು ಸಾಹಿತ್ಯ ಸಮ್ಮೇಳದ ಲಾಂಛನ ಬಿಡುಗಡೆದಾಂಡೇಲಿ: ಇದೇ ಫೆ. ೨೮ರಂದು ತಾಲೂಕಿು ೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಲೂರಿನಲ್ಲಿ ನಡೆಯಲಿದ್ದು, ಸಮ್ಮೇಳನದ ಲಾಂಛನ ಬಿಡುಗಡೆಯು ಇಲ್ಲಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸೋಮವಾರ ನಡೆಯಿತು.ತಹಸೀಲ್ದಾರ್ ಶೈಲೇಶ ಪರಮಾನಂದ ಅವರು ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನ ಮೂರನೇ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅವರು ಸಾಹಿತ್ಯ ಸಮ್ಮೇಳನದ ತಯಾರಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹನಾಧಿಕಾರಿ ಟಿ.ಸಿ. ಹಾದಿಮನಿ, ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರಜಾನ ನದಾಫ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಎಚ್.ಎಚ್., ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಾಮನ ಮಿರಾಶಿ, ಪಿಎಸ್‌ಐಗಳಾದ ಅಮೀನ ಅತ್ತಾರ, ಕಿರಣ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆ ಹೊಸೂರ, ದಾಂಡೇಲಿ ತಾಲೂಕು ಘಟದ ಅಧ್ಯಕ್ಷ ನಾರಾಯಣ ನಾಯ್ಕ, ಕಾರ್ಯದರ್ಶಿಗಳಾದ ಗುರುಶಾಂತ ಜಡೆಹಿರೇಮಠ, ಪ್ರವೀಣ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಬಿಜೆಪಿ ಘಟಕದ ಅಧ್ಯಕ್ಷ ಬುದವಂತಗೌಡ ಪಾಟೀಲ ಇತರರು ಇದ್ದರು.