ಮಕ್ಕಳೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ: ತಹಸೀಲ್ದಾರ್ ಶ್ರೀನಿವಾಸ್

KannadaprabhaNewsNetwork | Published : Jun 22, 2024 12:46 AM

ಸಾರಾಂಶ

ಇಂದು ನಾವು ಜೀತಮುಕ್ತ ಮತ್ತು ಪೋಷಕರಿಲ್ಲದ ಅತ್ಯಂತ ಕಡುಬಡತನದ ಮಕ್ಕಳಿಗೆ ಇಂದು ನಾವು ನೈತಿಕವಾಗಿ ನಿಮ್ಮೊಂದಿಗೆ ಇದ್ದೇವೆ ಎಂದು ಬೆಂಬಲ ನೀಡುತ್ತಿದ್ದೆವೆ. ಇದನ್ನು ಬಳಸಿಕೊಂಡು ನೀವು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ನಿಮಗಾಗಿ ತಮ್ಮ ಜೀವನವನ್ನೆ ಸವೆಸುತ್ತಿರುವ ಅಪ್ಪ ಅಮ್ಮರ ಕಷ್ಟವನ್ನು ನೀವು ನೆನಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಹ್ಯಾಂಡ್ ಪೋಸ್ಟ್‌ನ ಜೀವಿಕ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಜೀವಿಕ ಸಂಘಟನೆ ಮತ್ತು ಸುಭಾಷ್ ಪವರ್ ಕಾರ್ಪೋರೇಷನ್ ವತಿಯಿಂದ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕ ವಿತರಿಸಲಾಯಿತು.

ತಹಸೀಲ್ದಾರ್ ಶ್ರೀನಿವಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಒಂದೊಂದು ತುತ್ತು ಅನ್ನಕ್ಕೂ ಕಷ್ಟಪಟ್ಟು ಬಟ್ಟೆ ಇಲ್ಲದೇ ಪುಸ್ತಕ ಇಲ್ಲದೆ ಓದಿ ಮೇಲೆ ಬಂದೆ. ಅಷ್ಟೆ ಅಲ್ಲ ನಮ್ಮ ಮನೆಯಲ್ಲಿ ನಾಲ್ಕು ಜನ ಅಣ್ಣತಮ್ಮಂದಿರು ಇದ್ದರೆ ಮೊದಲನೇ ಅಣ್ಣನಿಗೆ ಕೊಡಿಸಿದ ಬ್ಯಾಗು ಎರಡನೇ ಮಗನಿಗೆ, ಎರಡನೇ ಯವನದು ಮೂರನೆಯವನಿಗೆ, ಮೂರನೇಯವನ ಬ್ಯಾಗ್ ಅಂತಿಮವಾಗಿ ಕೊನೆಯವನಿಗೆ ಅಂದರೆ ನನಗೆ ಬರುತ್ತಿತ್ತು. ಅಷ್ಟರಲ್ಲಿ ಆ ಬ್ಯಾಗನ್ನು ಬಳಸುವುದಕ್ಕೂ ಯೋಗ್ಯವಾಗಿರಲಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಓದಿ ಮಿಲಿಟರಿ ಸೇರಿ ದೇಶ ಸೇವೆ ಮಾಡಿ ನಂತರ ಕೆಎಎಸ್ ತೇರ್ಗಡೆಯಾಗಿ ತಹಸೀಲ್ದಾರ್ ಆಗಿ ಸೇವೆ ಮಾಡುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಾಸ್ತಾವಿಕವಾಗಿ ಜೀವಿಕ ರಾಜ್ಯ ಸಂಚಾಲಕ ಉಮೇಶ್ ಬಿ. ನೂರಲಕುಪ್ಪೆ ಮಾತನಾಡಿ, ಇಂದು ನಾವು ಜೀತಮುಕ್ತ ಮತ್ತು ಪೋಷಕರಿಲ್ಲದ ಅತ್ಯಂತ ಕಡುಬಡತನದ ಮಕ್ಕಳಿಗೆ ಇಂದು ನಾವು ನೈತಿಕವಾಗಿ ನಿಮ್ಮೊಂದಿಗೆ ಇದ್ದೇವೆ ಎಂದು ಬೆಂಬಲ ನೀಡುತ್ತಿದ್ದೆವೆ. ಇದನ್ನು ಬಳಸಿಕೊಂಡು ನೀವು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ನಿಮಗಾಗಿ ತಮ್ಮ ಜೀವನವನ್ನೆ ಸವೆಸುತ್ತಿರುವ ಅಪ್ಪ ಅಮ್ಮರ ಕಷ್ಟವನ್ನು ನೀವು ನೆನಪಿಸಿಕೊಳ್ಳಬೇಕು ಎಂದರು.

ಅವರ ದುಡಿಮೆಯ ಫಲವೇ ನಿಮಗೆ ಆದರ್ಶವಾಗಬೇಕು. ಮತ್ತೆ ಓದುವ ವಯಸ್ಸಿನಲ್ಲಿ ಅಡ್ಡದಾರಿ ಹಿಡಿಯಬಾರದು. ಹಾಗೆ ಪೋಷಕರು ಕೂಡ ತಮ್ಮ ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಗಮನ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಶಿಕ್ಷಣ ನಮಗೆ ಗೌರವ ಮತ್ತು ಘನತೆ ತಂದುಕೊಡುತ್ತದೆ. ಅದ್ದರಿಂದ ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು. ನಮ್ಮ ಬಾಲ್ಯವನ್ನು ನೆನೆಸಿಕೊಂಡರೆ ನಿಜವಾಗಿಯೂ ನಮಗೆ ನೋವಾಗುತ್ತದೆ. ಏಕೆಂದರೆ ನಮ್ಮ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವವರು ಇರಲೇ ಇಲ್ಲ. ಆದರೆ ಇಂದು ನೂರಾರು ಜನ ದಾನಿಗಳು ಮಕ್ಕಳ ವಿದ್ಯೆಗೆ ಸಹಾಯ ಮಾಡುತ್ತಿದ್ದಾರೆ ಎಂದರು.

ಇಂದು ಮಕ್ಕಳಿಗೆ ನೀಡಿರುವ ವಸ್ತುಗಳು ಅತ್ಯಂತ ಗುಣಮಟ್ಟದಿಂದ ಕೂಡಿವೆ. ಈ ಅವಕಾಶವನ್ನು ಬಳಸಿಕೊಂಡು ಪ್ರತಿಯೊಂದು ಮಗುವು ಉತ್ತ್ಯುತಮವಾಗಿ ಓದಿ ಉನ್ನತ ಹುದ್ದೆ ಪಡೆಯಬೇಕು. ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ದೊಡ್ಡ ದೊಡ್ಡ ಲೇಖಕರ. ಸಾಹಿತಿಗಳ. ದಾರ್ಶನಿಕರ ಅತ್ಯುತ್ತಮ ಪುಸ್ತಕಗಳನ್ನು ಓದಿ ಎಂದು ಹೇಳುವ ಮೂಲಕ ತಮ್ಮ ಬಾಲ್ಯಜೀವನದ ಪುಟಗಳನ್ನು ಮಕ್ಕಳ ಮುಂದೆ ತೆರೆದಿಟ್ಟರು.

ಬಳಿಕ ಮಾತನಾಡಿದ ಸುಭಾಷ್ ವಿದ್ಯುತ್ ಕಂಪನಿಯ ಹಿರಿಯ ವ್ಯವಸ್ಥಾಪಕ ಸೆಂದಿಲ್ ಕುಮಾರ್, ನಾನು ಬಾಲ್ಯದಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ನೆನೆಪಿಸಿಕೊಂಡು ಮುಂದೆ ನಮ್ಮ ಮಕ್ಕಳ ಜೀವನದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಬರಬಾರದು ಎಂದು ಮನಗಂಡು ನಾವು ಈ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈಜೋಡಿಸುತ್ತಿದ್ದೇವೆ. ತಂದೆ- ತಾಯಿಗಳು ಕೂಡ ಧಾರಾವಾಹಿ ಮತ್ತು ಸಿನಿಮಕ್ಕೆ ಅಂಟಿಕೊಳ್ಳದೇ ಮಕ್ಕಳ ಚಲನವಲನದ ಬಗ್ಗೆ ಗಮನ ಹರಿಸಿ ಮತ್ತೆ ಯಾವ ಮಗುವೂ ಕೂಡ ಬಟ್ಟೆಯಿಲ್ಲ, ಪುಸ್ತಕವಿಲ್ಲ, ನನಗೆ ಬಡತನ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು. ಓದುವ ಪ್ರಯತ್ನ ಬಿಡಬಾರದು ಎಂದರು.

ಈ ವೇಳೆ ಸುಮಾರು ಐವತ್ತಕ್ಕೂ ಹೆಚ್ವು ಮಕ್ಕಳಿಗೆ ಉತ್ತಮ ಗುಣಮಟ್ಟದ ಪಠ್ಯಪರಿಕರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೀವಿಕ ಬಸವರಾಜ್. ಪ್ರಗತಿಪರ ಮುಖಂಡ ಅಕ್ಬರ್ ಪಾಷ. ಶಿವಕುಮಾರ್. ಅಧ್ಯಕ್ಷ ಮಹದೇವ. ಮಾಜಿ ಅಧ್ಯಕ್ಷೆ ಮಲ್ಲಿಗಮ್ಮ. ಪೀಪಲ್ ಟ್ರೀ ಜವರೇಗೌಡ. ಎಂಜಿನಿಯರ್ ನಿರಂಜನ್. ಮಹೇಶ್ ಕುಮಾರ್. ಭಾಸ್ಕರ್. ಲಕ್ಷ್ಮಮ್ಮ. ಸಂಚಾಲಕ ಚಂದ್ರಶೇಖರಮೂರ್ತಿ. ಶಿವರಾಜ್ ಮಟಕೆರೆ. ವೆಂಕಟೇಶ್. ನಟರಾಜ್. ಶ್ರೀನಿವಾಸ್. ನಾಗಮ್ಮ. ಮಲ್ಲಿಗಮ್ಮ ಗೋಪಾಲ್ ಮತ್ತು ಮಕ್ಕಳು ಇದ್ದರು.

Share this article