ಕನ್ನಡಪ್ರಭ ವಾರ್ತೆ ಮುಳಬಾಗಿಲುತಂದೆ ತಾಯಿ ಶ್ರಮದಲ್ಲಿ ಮಕ್ಕಳು ಜೀವನ ನಡೆಸುವುದು ದೊಡ್ಡ ಸಾಧನೆ ಅಲ್ಲ. ಮಕ್ಕಳೇ ಕಷ್ಟಪಟ್ಟು ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಪಡೆದುಕೊಂಡು ಸ್ವಾಭಿಮಾನಿ ಜೀವನ ನಡೆಸಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಉಪ ಕುಲಪತಿ ಡಾ. ನಿರಂಜನ ವಾನಳ್ಳಿ ಹೇಳಿದರು.ನಗರದ ಅಮರ ಜ್ಯೋತಿ ಪದವಿ ಕಾಲೇಜಿನಲ್ಲಿ ಪದವಿ ಪೂರೈಸಿರುವ ೨೧೨ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿ ಮಾತನಾಡಿ, ಕೋಲಾರದ ಟಮಕದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಬಂದ ನಂತರ ಮೊದಲ ಬಾರಿಗೆ ಮುಳಬಾಗಿಲಿನ ಅಮರ ಜ್ಯೋತಿ ಪದವಿ ಕಾಲೇಜಿಗೆ ಬಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.ದೊಡ್ಡ ಕನಸು ಕಾಣಬೇಕು
ಪದವಿ ಪಡೆಯುವುದು ನಿಮ್ಮ ಜೀವನದಲ್ಲಿ ಮರೆಯಲಾಗದ ದಿನ ಎಂದರಲ್ಲದೆ ಪದವಿ ಜೊತೆಗೆ ಮಾಸ್ಟರ್ ಡಿಗ್ರಿ ಮಾಡಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಪದವಿಗೆ ದಾಖಲಾಗಿ ಎಂದು ಆಹ್ವಾನ ನೀಡಿದರಲ್ಲದೆ ಇಡೀ ಪ್ರಪಂಚದಲ್ಲೇ ಅತ್ಯಂತ ಕಡಿಮೆ ಶುಲ್ಕದಲ್ಲಿ ಬೆಂಗಳೂರು ವಿವಿ ಯಲ್ಲಿ ಬೋಧನೆ ಸಿಗುತ್ತದೆ ಜೊತೆಗೆ ಸರ್ಕಾರದ ಸೌಲತ್ತುಗಳು ಸಹ ಸಿಗುತ್ತದೆ ಎಂದು ಹೇಳಿದರು.
ವಿದ್ಯಾಸಂಸ್ಥೆಗೆ 25 ವರ್ಷಅಮರ ಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸಿ ೨೫ ವರ್ಷಗಳಾಗುತ್ತಿದ್ದು ಎಸ್‌ಎಸ್‌ಎಲ್‌ಸಿ ಪಿಯುಸಿ ಮತ್ತು ಪದವಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ರಾಜ್ಯದಲ್ಲಿ ರ್‍ಯಾಂಕ್ ಪಡೆಯುವ ಮೂಲಕ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಸಹನೆ, ಸಂಸ್ಕಾರ ಉತ್ತಮ ನಡುವಳಿಕೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರಲ್ಲದೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಸಂಸ್ಕಾರ ಮಾಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಯಲುವಹಳ್ಳಿ ಅಶೋಕ್ ಕುಮಾರ್, ಪ್ರಾಂಶುಪಾಲ ಸತ್ಯಮಯ್ಯ, ಮುಖ್ಯ ಶಿಕ್ಷಕರಾದ ಚಂಗಾರೆಡ್ಡಿ ಮುನಿನಾರಾಯಣಪ್ಪ ಇದ್ದರು.