ಕೊಪ್ಪಳ: ಪ್ರಕೃತಿ ನಮಗೆ ಬದುಕಲು ಎಲ್ಲವನ್ನೂ ಕೊಟ್ಟಿದೆ. ಅದನ್ನು ಹಾಳು ಮಾಡಿದರೆ ನಮ್ಮ ಮೇಲೆ ಪ್ರತಿಕಾರ ತೀರಿಸಿಕೊಳ್ಳುತ್ತದೆ, ಈಗ ಗಾಳಿಯ ಶುದ್ಧತೆ ಕುರಿತ ವರದಿಯೊಂದು ಹರಿದಾಡುತ್ತಿರುವುದು ಹಾಸ್ಯಾಸ್ಪದ ಎಂದು ನಿವೃತ್ತ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಈ ಕಂಪನಿ ಕಾರ್ಪೊರೇಟರಗಳು ಏನು ಬೇಕಾದರೂ ಮಾಡಿಸುತ್ತಾರೆ, ದೇಶದಲ್ಲಿ ಅನೇಕ ಅದ್ಭುತ ಸ್ವಚ್ಛ, ಅರಣ್ಯ, ಕಾರ್ಖಾನೆಗಳೇ ಇಲ್ಲದ ಜಿಲ್ಲೆ ನಗರಗಳು ಇದ್ದು, ಅವುಗಳನ್ನು ಮೀರಿ ಕಾರ್ಖಾನೆಗಳ ಹಬ್ ಆಗಿರುವ ಕೊಪ್ಪಳ ಶುದ್ಧ ಗಾಳಿ ನಗರದ ಬಿರುದು ಕೇವಲ ಸರ್ಕಾರ , ನ್ಯಾಯಾಲಯ ಮನವೊಲಿಸುವ ಪ್ರಯತ್ನ. ಕಾರ್ಖಾನೆಗಳು ಮಾಡುತ್ತಿರುವ ಹಾನಿಗೆ ಪರಿಸರವೇ ಪ್ರತಿಕಾರ ತೀರಿಸಿಕೊಳ್ಳುತ್ತದೆ ಎಂದರು.
ಕೊಪ್ಪಳದಲ್ಲಿ ಒಂದೇ ಕಡೆ ಕೇಂದ್ರೀಕರಿಸಿ ಸ್ಥಾಪಿಸಿದ ಕಾರ್ಖಾನೆಗಳಿಂದ ಧಾರಣ ಸಾಮರ್ಥ್ಯ ಕಳೆದುಕೊಂಡಿದೆ. ಇದು ಸರ್ಕಾರಕ್ಕೆ ಗೊತ್ತಿದ್ದರೂ ಮತ್ತೆ ಇಲ್ಲಿ ಬಂಡವಾಳದ ಆಕರ್ಷಣೆ ಮಾಡುವುದು, ಕಾರ್ಖಾನೆಗಳಿಗೆ ಮೂಲ ಸೌಕರ್ಯ ಒದಗಿಸಿ ಕೊಡುವುದು, ಕೇಂದ್ರ ರಾಜ್ಯದ ಮೇಲೆ ರಾಜ್ಯ ಕೇಂದ್ರದ ಮೇಲೆ ಕೆಸರೆರಚಿಕೊಳ್ಳುವುದು ನಡೆದಿದೆ. ಇಲ್ಲಿ ಜನರ ಆರೋಗ್ಯ, ಕೃಷಿ, ಪಶು ಸಂಗೋಪನೆ, ಕುಕ್ಕಟೋದ್ಯಮ ಎಲ್ಲವನ್ನು ನಾಶ ಮಾಡಲಾಗಿದೆ. ಈ ಕಾರ್ಖಾನೆಗಳ ಮಾಲೀಕರ ದಾಹ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುತ್ತದೆ. ಪಕ್ಕದ ಚೈನಾ ದೇಶ ಏನೆಲ್ಲ ಅಭಿವೃದ್ಧಿ ಸಾಧಿಸಿದೆಯಾದರೂ ಪ್ರಕೃತಿ ದೇವರಂತೆ ಪೂಜಿಸುತ್ತಾ ಮಾಲಿನ್ಯವಾಗದಂತೆ ನೋಡಿಕೊಳ್ಳುತ್ತದೆ. ರೈತರನ್ನು ಕಡೆಗಣಿಸುವ ಸರ್ಕಾರಗಳು ಇತ್ತಕಡೆ ಗಮನ ಕೊಡಬೇಕು. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಗಂಭೀರವಾಗಿ ಚರ್ಚೆ ಆಗಬೇಕು ಎಂದರು.ಭಾರತೀಯ ಕ್ರಾಂತಿಕಾರಿ ಕಿಸಾನ ಸೇನಾ ರಾಜ್ಯ ಕಾರ್ಯದರ್ಶಿ ಹನುಮೇಶ ಶಾಖಾಪುರ ಮಾತನಾಡಿ, ಫೆಬ್ರವರಿಯಲ್ಲಿ ನಡೆಸಿದ ಗವಿಶ್ರೀಗಳ ನೇತೃತ್ವದ ಬಂದ್ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ಬಾಧಿತ ಹಳ್ಳಿಗಳ ಕೃಷಿ ರಕ್ಷಿಸುವಂತೆ, ಜನ-ಜಾನುವಾರು ರಕ್ಷಣೆ ಮಾಡುವಂತೆ ಕೋರಿದ್ದೇವೆ.ಆದರೆ ಇದುವರೆಗೆ ಸರ್ಕಾರ ಇದರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ವಿಫಲವಾಗಿದೆ. ಇದು ಲಕ್ಷಗಟ್ಟಲೆ ಜನರ ಸಮಸ್ಯೆ ಎಂದು ಗೊತ್ತಿದ್ದರೂ ಸರ್ಕಾರ ಕಡೆಗಣನೆ ಮಾಡುತ್ತಿರುವುದು ನಮ್ಮ ಸೇನಾ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಹೋರಾಟದ ಕ್ರಾಂತಿಕಾರಿ ಬದಲಾವಣೆಗಾಗಿ ರೈತ ಸಂಘ ಎಂತಹ ಸಂಘರ್ಷಕ್ಕಿಳಿಯಲು ಸಿದ್ಧವಿದೆ ಎಂದರು.