ಹುಬ್ಬಳ್ಳಿ: ನಗರ ಯೋಜನಾ ಅಧ್ಯಯನಕ್ಕಾಗಿ ಅಹಮದಾಬಾದ್ ಪ್ರವಾಸಕ್ಕೆ ತೆರಳಿರುವ ಇಲ್ಲಿನ ನಿಯೋಗವೂ ಗುರುವಾರ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಎಯುಡಿಎ) ಭೇಟಿ ನೀಡಿ ಟೌನ್ ಪ್ಲಾನಿಂಗ್ ಸ್ಕೀಮ್ ಕುರಿತು ಮಾಹಿತಿ ಪಡೆಯಿತು.
ಶಾಶ್ವತ ಮೂಲಸೌಕರ್ಯಗಳ ಅಭಿವೃದ್ಧಿ, ಭೂಮಿಯ ಪುನರ್ ಹಂಚಿಕೆ, ಭೂಮಾಲೀಕರ ಹಕ್ಕುಗಳ ರಕ್ಷಣೆ ಹಾಗೂ ಸಾರ್ವಜನಿಕ ಪಾಲ್ಗೊಳ್ಳುವಿಕೆ ಕುರಿತು ಎಯುಡಿಎ ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮುಂದಿನ ಯೋಜನೆ ರೂಪುರೇಷೆಗೆ ಪ್ರೇರಕವಾಗಲಿದೆ. ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಅನೇಕ ಟೌನ್ ಪ್ಲಾನಿಂಗ್ ಯೋಜನೆಗಳ ಪ್ರಗತಿಯನ್ನು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅದರೊಳಗೆ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲುಎಸ್) ಗೃಹ ಯೋಜನೆಗಳು, ರಸ್ತೆಗಳ ಅಭಿವೃದ್ಧಿಗಾಗಿ ಭೂಮಿಯನ್ನು ಸಂಗ್ರಹಿಸುವ ವಿಧಾನ, ಭೂಪೂರ್ವ ಮಾಲೀಕರಿಗೆ ಪುನರ್ ಹಂಚಿಕೆ ನೀಡುವ ಪ್ರಕ್ರಿಯೆ, ಮೂಲಸೌಕರ್ಯ ಅಭಿವೃದ್ಧಿಯ ನಿರ್ವಹಣಾ ತಂತ್ರಗಳು ಸೇರಿದಂತೆ ಹಲವಾರು ಅಂಶಗಳನ್ನು ತ್ವರಿತವಾಗಿ ಹಾಗೂ ತಾಂತ್ರಿಕವಾಗಿ ಅಧ್ಯಯನ ಮಾಡಲಾಯಿತು.ಈ ಅಧ್ಯಯನದಿಂದ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಟೌನ್ ಪ್ಲಾನಿಂಗ್ ಯೋಜನೆ ಜಾರಿಗೊಳಿಸಲು ಅನುಕೂಲವಾಗಲಿದೆ ಎಂದು ನಿಯೋಗದಲ್ಲಿನ ಪ್ರತಿನಿಧಿಗಳು ತಿಳಿಸಿದರು.