ಹಾವೇರಿ: ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಏಕಾಗ್ರತೆ ಹಾಗೂ ದೃಢ ವಿಶ್ವಾಸದೊಂದಿಗೆ ಶಿಸ್ತುಬದ್ಧ ಅಧ್ಯಯನ ನಡೆಸಿ, ಪರೀಕ್ಷೆ ಎದುರಿಸಿದಾಗ ಸಾಧನೆ ಶತಸಿದ್ಧ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಜಿಪಂ ಸಿಇಒ ರುಚಿ ಬಿಂದಲ್ ಮಾತನಾಡಿ, ಪರೀಕ್ಷೆಯಲ್ಲಿ ಛಲ ಮತ್ತು ಗುರಿ ಇಟ್ಟುಕೊಳ್ಳಬೇಕು. ಸತತ ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿಕೊಂಡು ನಮ್ಮ ಗುರಿಯನ್ನು ತಲುಪಿದಾಗ ನಮ್ಮ ಹೆತ್ತ ತಂದೆ-ತಾಯಿಗಳಿಗೆ ನಾವು ಗೌರವ ನೀಡಿದಂತಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಉತ್ತಮ ವೃತ್ತಿಯಲ್ಲಿ ತೊಡಗಿದಾಗ ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ. ಹೀಗಾಗಿ ತಾವೆಲ್ಲರೂ ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಮೋಹನ್ ದಂಡಿನ್ ಮಾತನಾಡಿ, ಮಕ್ಕಳು ಪರೀಕ್ಷೆಗಾಗಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಸಮಯ ಹೊಂದಾಣಿಕೆ ಹೇಗೆ ಮಾಡಿಕೊಳ್ಳಬೇಕು. ಮಾದರಿ ಪ್ರಶ್ನೆಪತ್ರಿಕೆ ಹಾಗೂ ಹಳೆಯ ಪ್ರಶ್ನೆಪತ್ರಿಕೆ ಬಿಡಿಸುವುದನ್ನು ಹೆಚ್ಚು ರೂಢಿ ಮಾಡಿಕೊಳ್ಳಬೇಕು. ಅಲ್ಲದೆ ಮೂರು ಪೂರ್ವ ಸಿದ್ಧತಾ ಪರೀಕ್ಷೆಗೆ ಕಡ್ಡಾಯವಾಗಿ ಎಲ್ಲರೂ ಹಾಜರಾಗಿ ನಿರಂತರ ಅಧ್ಯಯನ ಮಾಡಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕು ಎಂದರು.ಪ್ರೇರಣಾತ್ಮಕ ಕಾರ್ಯಾಗಾರದಲ್ಲಿ ಹಾವೇರಿ ತಾಲೂಕಿನಾದ್ಯಂತ ಸುಮಾರು 84 ಶಾಲೆಗಳಿಂದ ಪ್ರತಿ ಶಾಲೆಯಿಂದ ತಲಾ ಎಂಟು ಮಕ್ಕಳಂತೆ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.
ಡಯೆಟ್ ಪ್ರಾಚಾರ್ಯ ಝೆಡ್.ಎಂ. ಖಾಜಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ವರದಾ ಜ್ಞಾನವಾಹಿನಿ ಯೂಟ್ಯೂಬ್ ಚಾನೆಲ್ ಆರಂಭಿಸಿರುವ ಕುರಿತು ಮಾತನಾಡಿದರು. ಧಾರವಾಡದ ಸುರೇಶ ಕುಲಕರ್ಣಿ, ಕ್ಷೇತ್ರ ಸಮನ್ವಯ ಅಧಿಕಾರಿ ಮಹದೇವಪ್ಪ ಎಂ.ಡಿ., ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ಎಂ. ಬೇವಿನಮರದ, ಆರ್.ಎಸ್. ಭಜಂತ್ರಿ, ಸಿ.ಐ. ಕುನ್ನೂರ, ಎಂ.ಬಿ. ರಮೇಶ, ಆನಂದ ಉರ್ಮಿ ಇದ್ದರು. ಬಿ.ಕೆ. ಹನುಮಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.