ಯುಜಿಸಿ ನೆಟ್, ಕೆ-ಸೆಟ್ ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ
ಜ್ಞಾನ ಗಳಿಸುವ ಜತೆಗೆ ಪಡೆದುಕೊಂಡ ಜ್ಞಾನವನ್ನು ಎಲ್ಲರ ಮುಂದೆ ಹೇಗೆ ಮಂಡಿಸಬೇಕು ಎಂಬುದು ಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಸಾಧನೆಗೆ ಓದು ನಿರಂತರವಾಗಿರಬೇಕು ಮತ್ತು ಹೆಚ್ಚು ಶ್ರಮವಹಿಸಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ಪಂಪ ಸಭಾಂಗಣದಲ್ಲಿ 21 ದಿನಗಳ ಯುಜಿಸಿ ನೆಟ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲೇ ಉನ್ನತ ಸ್ಥಾನ ಪಡೆಯುವ ಬಯಕೆ ನಿಮಗಿರಲಿ. ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರಗಳು ಶೈಕ್ಷಣಿಕ ವಾತಾವರಣ ರೂಪಿಸುತ್ತವೆ. ಇದರ ಸದುಪಯೋಗಪಡಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿಲ್ಲ ಎಂದ ಮಾತ್ರಕ್ಕೆ ಜೀವನದಲ್ಲಿ ಸೋತೆವೆಂದು ಅಲ್ಲ, ಅದರ ಆಚೆಗೆ ನಿಮ್ಮಲ್ಲಿರುವ ಜ್ಞಾನ ಬಳಸಿಕೊಂಡು ಬದುಕು ಕಟ್ಟಿಕೊಳ್ಳಿ ಎಂದರು.
ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎರ‍್ರಿಸ್ವಾಮಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣವನ್ನು ಬೆಳಸುತ್ತವೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಜತೆಗೆ ವೃತ್ತಿ ಜೀವನವನ್ನು ಚೆನ್ನಾಗಿ ನಿಭಾಯಿಸಲು ಸಹಾಯಕವಾಗುತ್ತವೆ ಎಂದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.