ಹುಣಸೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಆಗ್ರಹ

KannadaprabhaNewsNetwork |  
Published : Aug 30, 2024, 01:02 AM IST
60 | Kannada Prabha

ಸಾರಾಂಶ

ಆದರೆ ಆದೇಶ ದೊರಕಿ 5 ದಿನ ಕಳೆದರು ಸಹ ಉಪವಿಭಾಗಾಧಿಕಾರಿ ಚುನಾವಣಾ ದಿನಾಂಕವನ್ನು ಘೋಷಿಸಿಲ್ಲ.

ಕನ್ನಡಪ್ರಭ ವಾರ್ತೆ ಹುಣಸೂರು

ಹುಣಸೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಉಪವಿಭಾಗಾಧಿಕಾರಿ ವಿಳಂಬನೀತಿ ತೋರುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆಯ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಮತ್ತು ಪಕ್ಷದ ಕಾರ್ಯರ್ತರು ಪ್ರತಿಭಟಿಸಿದರು.

ಗುರುವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸದಸ್ಯರು, ಉಪವಿಭಾಗಾಧಿಕಾರಿ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ನಗರಸಭೆ ಸದಸ್ಯ ಎಚ್.ಪಿ. ಸತೀಶ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಆ. 5ರಂದು ಪ್ರಕಟಿಸಿದೆ. ಅದರಂತೆ ಹುಣಸೂರು ನಗರಸಭೆಯ ಅಧ್ಯಕ್ಷಸ್ಥಾನ ಬಿಸಿಎಂ(ಎ) ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆಗೆ ಮೀಸಲಾಗಿದೆ. ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಹುಣಸೂರು ಉಪವಿಭಾಗದ ಉಪವಿಭಾಗಾಧಿಕಾರಿ (ಚುನಾವಣಾಧಿಕಾರಿಯಾಗಿದ್ದಾರೆ)ಗೆ ಆ. 24ರಂದು ಚುನಾವಣೆ ನಡೆಸಲು ಕ್ರಮಕೈಗೊಳ್ಳಲು ಲಿಖಿತ ಆದೇಶ ನೀಡಿದ್ದಾರೆ ಎಂದರು.

ಆದರೆ ಆದೇಶ ದೊರಕಿ 5 ದಿನ ಕಳೆದರು ಸಹ ಉಪವಿಭಾಗಾಧಿಕಾರಿ ಚುನಾವಣಾ ದಿನಾಂಕವನ್ನು ಘೋಷಿಸಿಲ್ಲ. ಇದು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾಡುತ್ತಿರುವ ಅನ್ಯಾಯ. ಎರಡೂವರೆ ವರ್ಷಗಳ ಬಾಕಿ ಅವಧಿಯಲ್ಲಿ ಈಗಾಗಲೇ 16 ತಿಂಗಳು ಸರ್ಕಾರ ಹಾಳು ಮಾಡಿದೆ. ಇದೀಗ ಕೇವಲ 14 ತಿಂಗಳು ಮಾತ್ರ ಉಳಿದಿದೆ. ಇದನ್ನೂ ಅಧಿಕಾರಿಗಳು ಕೆಲ ಕಾಣದ ಕೈಗಳ ಕೈಗೊಂಬೆಯಾಗಿ ನಡೆದುಕೊಂಡು ಸಂವಿಧಾನಾತ್ಮಕವಾದ ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಈ ನಡುವೆ ನಗರಸಭೆಯ ಸಾಮಾನ್ಯ ಸಭೆಯನ್ನು ಆಯೋಜಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಿದ್ದರು. ಅದನ್ನು ಸದಸ್ಯರು ಆಕ್ಷೇಪಿಸಿ ತಡೆದು ನಿಲ್ಲಿಸಿದ್ದೇವೆ. ಉಪವಿಭಾಗಾಧಿಕಾರಿಗಳು ಈ ಕೂಡಲೇ ಚುನಾವಣಾ ದಿನಾಂಕವನ್ನು ಘೋಷಿಸಿ ಜನರ ಸೇವೆ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯ ರಮೇಶ್ ಮಾತನಾಡಿದರು.

ಸದಸ್ಯರಾದ ಗಣೇಶ್ ಕುಮಾರಸ್ವಾಮಿ ಮಾತನಾಡಿದರು. ಜೆಡಿಎಸ್ ಸದಸ್ಯರಾದ ಶರವಣ, ಕೃಷ್ಣರಾಜ ಗುಪ್ತ, ಹರೀಶ್, ದೇವರಾಜ್, ರಾಧಾ, ರಾಣಿ ಪೆರುಮಾಳ್, ಆಶಾನಾಯಕ, ಶಾಹಿನ್ ತಾಜ್, ವಿವೇಕಾನಂದ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಅಸ್ವಾಳ್ ಕೆಂಪೇಗೌಡ, ರಮೇಶ್ ಇದ್ದರು. ಉಪವಿಭಾಗಾಧಿಕಾರಿ ಎಚ್.ಬಿ. ವಿಜಯಕುಮಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಶೀಘ್ರ ಚುನಾವಣಾ ದಿನಾಂಕ ಘೋಷಿಸಿವುದಾಗಿ ಭರವಸೆ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ