ಸಂಡೂರು ಉಪಕಣ; ರಾಜಕೀಯ ನಾಯಕರ ನಿತ್ಯ ದರ್ಶನ

KannadaprabhaNewsNetwork | Updated : Nov 06 2024, 11:58 PM IST

ಸಾರಾಂಶ

ಸದಾ ಲಾರಿಗಳ ಓಡಾಟದ ದೃಶ್ಯ ಕಂಡು ಬರುತ್ತಿದ್ದ ಇಲ್ಲಿನ ರಸ್ತೆಗಳಲ್ಲಿ ಈಗ ದುಬಾರಿ ಕಾರುಗಳ ದರ್ಶನವಾಗುತ್ತಿದೆ.

ವಿಶೇಷ ವರದಿ

ಬಳ್ಳಾರಿ: ಸದಾ ಗಣಿ ಧೂಳು, ಲಾರಿಗಳ ಓಡಾಟದ ಆರ್ಭಟವಷ್ಟೇ ಕೇಳಿ ಬರುತ್ತಿದ್ದ ಸಂಡೂರಿನಲ್ಲೀಗ ಉಪ ಚುನಾವಣೆಯ ಜ್ವರದ ಅಧಿಕ ತಾಪಮಾನ ತಲುಪಿದೆ.

ಚುನಾವಣೆ ಪ್ರಚಾರಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಸಂಡೂರಿಗೆ ದಾಂಗುಡಿ ಇಡುತ್ತಿದ್ದಾರೆ. ಸದಾ ಲಾರಿಗಳ ಓಡಾಟದ ದೃಶ್ಯ ಕಂಡು ಬರುತ್ತಿದ್ದ ಇಲ್ಲಿನ ರಸ್ತೆಗಳಲ್ಲಿ ಈಗ ದುಬಾರಿ ಕಾರುಗಳ ದರ್ಶನವಾಗುತ್ತಿದೆ.

ರಾಜಕೀಯ ನಾಯಕರನ್ನು ನಿತ್ಯ ಸುದ್ದಿವಾಹಿನಿಗಳಲ್ಲಷ್ಟೇ ನೋಡುತ್ತಿದ್ದ ಸಂಡೂರಿನ ಜನ, ಇದೀಗ ರಾಜ್ಯ ನಾಯಕರ ಪ್ರತ್ಯಕ್ಷ ದರ್ಶನ, ರೋಷಾವೇಶದ ಭಾಷಣದಿಂದ ಪುಳಕಗೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಹಳ್ಳಿಗಳನ್ನೂ ನಿರ್ಲಕ್ಷಿಸದೆ ಮತದಾರರ ಮನೆ ಬಾಗಿಲು ತಟ್ಟುತ್ತಿರುವ ರಾಜಕೀಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಅಭಿವೃದ್ಧಿಗೆ ಆಸ್ಪದ ಮಾಡಿಕೊಡುವಂತೆ ಮೊರೆ ಇಡುತ್ತಿದ್ದಾರೆ.

ಏತನ್ಮಧ್ಯೆ, ಎರಡು ಪಕ್ಷಗಳ ನಾಯಕರ ಆಗಮನದಿಂದ ಸಂಡೂರಿನ ಹೋಟೆಲ್ ಲಾಡ್ಜ್‌ಗಳು ಹೌಸ್‌ಫುಲ್ ಆಗಿವೆ. ರಾಜಕೀಯ ನಾಯಕರ ಸಂಖ್ಯೆ ದಿನ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸ್ಥಳೀಯವಾಗಿ ವಸತಿ ಸೌಕರ್ಯ ಕಲ್ಪಿಸುವುದು ಪಕ್ಷದ ಸ್ಥಳೀಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಅನೇಕ ನಾಯಕರು ಜಿಂದಾಲ್ ವಸತಿ ಸಮುಚ್ಚಯ, ಬಳ್ಳಾರಿ, ಹೊಸಪೇಟೆಯಲ್ಲಿ ವಾಸ್ತವ್ಯ ಮಾಡಿ ಅಲ್ಲಿಂದಲೇ ಕ್ಷೇತ್ರದ ಹಳ್ಳಿಗಳಿಗೆ ಪ್ರಚಾರಕ್ಕೆ ಓಡಾಡುವಂತಾಗಿದೆ.

ಜಾತಿವಾರು ಲೆಕ್ಕಾಚಾರ:

ಕ್ಷೇತ್ರದಲ್ಲಿ ಅತಿಹೆಚ್ಚು ಮತದಾರರು ಇರುವ ಊರು ಯಾವುದು? ಅಲ್ಲಿ ಯಾವ ಸಮುದಾಯದ ಮತಗಳು ಹೆಚ್ಚಿವೆ? ಈ ಹಿಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ? ಊರಿನ ಹಿಡಿತ ಯಾರ ಸಮುದಾಯದ ತೆಕ್ಕೆಯಲ್ಲಿದೆ? ಉಳಿದ ಊರುಗಳಲ್ಲಿ ಮತದಾನದ ಪ್ರಮಾಣ ಹೇಗಿದೆ? ಯಾವ ವಿಚಾರಗಳನ್ನಿಟ್ಟುಕೊಂಡು ಚುನಾವಣಾ ಭಾಷಣ ಮಾಡಿದರೆ ಹೆಚ್ಚು ಅನುಕೂಲ? ಈ ಹಿಂದೆ ಚುನಾವಣೆಯಲ್ಲಿ ಪ್ರತಿಪಕ್ಷಕ್ಕೆ ಮತ ನೀಡಿದವರ ಮನವೊಲಿಕೆಗೆ ಏನು ಮಾಡಬೇಕು? ಎನ್ನುವ ನಾನಾ ಬಗೆಯ ಲೆಕ್ಕಾಚಾರ ನಡೆಯುತ್ತಿವೆ. ಮತದಾರರ ಮನವೊಲಿಸಲು ಬೇಕಾದ ತಂತ್ರಗಾರಿಕೆಯನ್ನು ಎರಡು ಪಕ್ಷಗಳು ಮಾಡುತ್ತಿವೆ.

ಊಟ-ನಿದ್ರೆಗಳಲ್ಲದೆ ತಿರುಗಾಟ:

ತೀವ್ರ ಪೈಪೋಟಿ ಕಂಡು ಬಂದಿರುವ ಸಂಡೂರು ಉಪ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಜವಾಬ್ದಾರಿ ಹೊತ್ತ ನಾಯಕರು ಊಟ, ನಿದ್ರೆಗಳಲ್ಲಿದೆ ತಿರುಗಾಟ ನಡೆಸಿದ್ದಾರೆ. ಕೃಷಿ ಕಾರ್ಮಿಕರು ಹಾಗೂ ಕಾರ್ಖಾನೆ ಕಾರ್ಮಿಕರು ಮನೆ ಬಿಡುವ ಮುನ್ನವೇ ಮತದಾರರ ಬಳಿ ತೆರಳುವ ಅನಿವಾರ್ಯತೆ ಸೃಷ್ಟಿಯಾಗಿದ್ದು ಹಸಿವು, ನಿದ್ರೆಯತ್ತ ಚಿತ್ತ ಹರಿಸದೇ ಮತದಾರರ ಬಳಿ ತೆರಳುತ್ತಿದ್ದಾರೆ. ಬೆಳಗ್ಗೆಯಿಂದ ಪ್ರಚಾರ, ಮಧ್ಯಾಹ್ನ ಕೆಲವು ಹೊತ್ತು ವಿಶ್ರಾಂತಿ ಪಡೆದು, ಮತ್ತೆ ಪ್ರಚಾರದ ಕಡೆ ನಾಯಕರು ತೆರಳುತ್ತಿದ್ದಾರೆ. ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು ಸಹ ತಡರಾತ್ರಿ ಮನೆ ತಲುಪುತ್ತಿದ್ದು, ಬೆಳಗಿನ ಜಾವವೇ ಎದ್ದು ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಾ ಅವರ ಪರ ಸಚಿವ ಸಂತೋಷ್‌ ಲಾಡ್, ಸಂಸದ ಈ.ತುಕಾರಾಂ ದಣಿವಿಲ್ಲದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಶಾಸಕ ಜನಾರ್ದನ ರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಸೇರಿದಂತೆ ಅನೇಕ ನಾಯಕರು ಬಿಡುವಿಲ್ಲದ ಪ್ರಚಾರದಲ್ಲಿ ನಿರತರಾಗಿದ್ದಾರೆ.ನೂರಾರು ಜನರ ಹೊಟ್ಟೆ ತುಂಬಿಸುತ್ತಿದೆ ಚುನಾವಣೆ:

ಸಂಡೂರು ಉಪ ಚುನಾವಣೆ ನೂರಾರು ಜನರಿಗೆ ಪರೋಕ್ಷವಾಗಿ ಹೊಟ್ಟೆ ತುಂಬಿಸುತ್ತಿದೆ. ಪ್ರಚಾರದ ವಾಹನಗಳು, ಮೈಕ್, ಕರಪತ್ರ, ಬಂಟಿಂಗ್ಸ್ ಇತರ ಪ್ರಚಾರ ಸಾಮಗ್ರಿಗಳು, ಹಾರ, ತುರಾಯಿಗಳಿಗೆ ಬೇಡಿಕೆ ಬಂದಿದೆ.

ಉಪ ಚುನಾವಣೆ ಬೀದಿಬದಿಯ ವ್ಯಾಪಾರಿಗಳಿಗೂ ಅನುಕೂಲ ಒದಗಿಸಿದೆ. ನಿತ್ಯ ಕಾರ್ಮಿಕರ ಮೇಲೆ ಅವಲಂಬಿತರಾಗಿದ್ದ ಬೀದಿ ಬದಿಯ ಹೋಟೆಲ್‌ಗಳು ಇದೀಗ ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿವೆ. ಕಳೆದ ಹತ್ತಾರು ದಿನಗಳಿಂದ ಅನೇಕರ ಪಾಲಿಗೆ ಉಪ ಚುನಾವಣೆ ಆದಾಯದ ಮೂಲವಾಗಿದೆ.

Share this article