ಕನ್ನಡಪ್ರಭ ವಾರ್ತೆ ವಿಜಯಪುರ
ಮಹಾನಗರ ಪಾಲಿಕೆ ಸದಸ್ಯರು ಹಾಗೂ ಶಾಸಕ ಯತ್ನಾಳ ಬೆಂಬಲಿಗರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ತಪ್ಪುಗಳು ಇದ್ದಲ್ಲಿ ಕಾರ್ಯಕರ್ತರು ಪರಿಶೀಲನೆಗಾಗಿ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ. ಚುನಾವಣೆ ಆಯೋಗದ ನಿಯಮದಂತೆಯೇ ಆಯೋಗದ ಫಾರ್ಮ್ 7ರಲ್ಲಿ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ಆದರೆ ಕೆಲವರು ಬಿಎಲ್ಒಗಳ ಬಳಿಯಿಂದ ಆಕ್ಷೇಪಣೆ ಅರ್ಜಿಗಳನ್ನು ಒತ್ತಾಯಪೂರ್ವಕವಾಗಿ ಕಸಿದುಕೊಳ್ಳುತ್ತಿದ್ದಾರೆ. ಈ ರೀತಿ ಗೂಂಡಾ ಪ್ರವರ್ತನೆ ತೋರಿಸಿ ಬಿಎಲ್ಒಗಳಿಗೆ ಬೆದರಿಕೆ ಹಾಕುವ ಕೆಲಸ ನಡೆಯುತ್ತಿದೆ ಎಂದು ಪರೋಕ್ಷವಾಗಿ ನಗರ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ವಿರುದ್ಧ ಹರಿಹಾಯ್ದರು. ಎಸ್‌ಐಆರ್ ಪ್ರಕ್ರಿಯೆ ಅಂತಿಮವಾಗಿ ಮುಗಿದಿಲ್ಲ, ಆದರೂ ಇವರು 16 ಸಾವಿರ ಆಕ್ಷೇಪಣೆ ಅರ್ಜಿಗಳು ಬಂದಿವೆ ಎಂದು ನಿಖರವಾಗಿ ಹೇಳುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಇವರು ಚುನಾವಣೆ ಗೌಪ್ಯತೆ ಉಲ್ಲಂಘಿಸಿದ್ದಾರೆ. ನಿಮ್ಮ ಜತೆ ನಗರ ಶಾಸಕರು, ಹಿಂದೂ ಕಾರ್ಯಕರ್ತರಿದ್ದಾರೆ, ಹಾಗಾಗಿ ಬಿ.ಎಲ್.ಒ ಗಳು ಇಂತಹವರ ಬೆದರಿಕೆಗೆ ಹೆದರಬಾರದು ಎಂದರು.
ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಅಬ್ದುಲ್‌ಹಮೀದ್ ಮುಶ್ರೀಫ್ ಅವರು ಸುದ್ದಿಗೋಷ್ಠಿ ನಡೆಸಿದಾಗಲೊಮ್ಮೆ ಸಿದ್ಧಸಿರಿ ಸೌಹಾರ್ದದ ಹೆಸರನ್ನು ಬಳಕೆ ಮಾಡುತ್ತಿದ್ದು, ಇನ್ನೊಮ್ಮೆ ಸಿದ್ಧಸಿರಿ ಸೌಹಾರ್ದದ ಹೆಸರು ಬಳಸಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಂಕರ ಹೂಗಾರ ಮಾತನಾಡಿ, ಚುನಾವಣೆ ಆಯೋಗ ಎಸ್.ಐ.ಆರ್ ಪ್ರಕ್ರಿಯೆ ಮಾಡುತ್ತಿರುವುದೇ ನಕಲಿ ವೋಟು ಡಿಲೀಟ್ ಆಗಬೇಕು ಎಂದು. ಹಾಗಾಗಿಯೇ ನಕಲಿ ಮತದಾರರು ಸೃಷ್ಠಿಯಾಗಬಾರದು ಎಂದು ನಾವು ಅನುಮಾನ ಬಂದಿರುವ ಸುಮಾರು 18 ಸಾವಿರ ಜನರ ಬಗ್ಗೆ ಪರಿಶೀಲನೆ ನಡೆಸುವಂತೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ ಕೆಲವರು ನಮ್ಮ ಮೇಲೆ ದೂರು ಸಲ್ಲಿಸುತ್ತೇವೆ, ನಮ್ಮನ್ನು ಜೈಲಿಗೆ ಹಾಕಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಿಮ್ಮ ಬೆದರಿಕೆಗೆ ಹೆದರುವುದಿಲ್ಲ. ಎಲ್ಲರಿಗೂ ಕಾನೂನು ಇದೆ, ಕಾನೂನು ಹೋರಾಟ ಮಾಡುತ್ತೇವೆ ಎಂದರು.