ಕನ್ನಡಪ್ರಭ ವಾರ್ತೆ ಕಡೂರು
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಈಗಾಗಲೇ 5 ಎಕರೆ ಜಾಗಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಶೀಘ್ರದಲ್ಲೇ ಜಾಗ ಮಂಜೂರಾತಿ ದೊರೆಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.ಅವರು ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‍ಎಸ್‍ಎಸ್ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಹಾಗೂ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಕಾಲೇಜು ಜೀವನವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು. ತಾವು ಕೂಡ ಇದೇ ಕಾಲೇಜಿನಲ್ಲಿ ಶಿಕ್ಷಣ ಪಡೆದು ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಇಂದು ಶಾಸಕನಾಗಿ ಆಯ್ಕೆಗೊಳ್ಳಲು ಕಾಲೇಜು ಜೀವನದಲ್ಲಿ ಅಳವಡಿಸಿಕೊಂಡ ನಾಯಕತ್ವ ಗುಣಗಳೇ ಹೆಚ್ಚು ಕಾರಣವಾಗಿದೆ ಎಂದು ತಿಳಿಸಿದರು.ಪಟ್ಟಣದಲ್ಲಿರುವ ಪ್ರಥಮ ದರ್ಜೆ ಕಾಲೇಜಿಗೆ ತನ್ನದೇ ಆದ ಇತಿಹಾಸವಿದ್ದು, ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಕಾಲೇಜನ್ನು ಮತ್ತಷ್ಟು ಅಭಿವೃದ್ಧಿಗೆ ಚಿಂತಿಸಿ ಪರ್ಯಾಯವಾದ 5 ಎಕರೆ ಜಾಗದಲ್ಲಿ ನೂತನ ಕಟ್ಟಡದ ಪ್ರಸ್ತಾವನೆಯು ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ಶೀಘ್ರದಲ್ಲೇ ಜಾಗ ಮಂಜೂರು ಆಶಯ ಹೊಂದಿದ್ದು, ಕಾಲೇಜು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಕಾಲೇಜಿನಿಂದ ಗೌರವ ಸ್ವೀಕರಿಸಿದ ಮಾಜಿ ಸಚಿವರಾದ ಬಿ.ಟಿ. ಲಲಿತಾನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಗುರಿ ಮುಟ್ಟಲು ಸಂಕಲ್ಪ ಮಾಡಬೇಕು. ವಿದ್ಯಾರ್ಥಿ ದಿಸೆಯಲ್ಲೇ ದೊಡ್ಡವರ ದರ್ಪವನ್ನು ತಿರಸ್ಕರಿಸಿ ಮತ್ತು ಮೇಲು ಕೀಳೆಂಬುದನ್ನು ವಿರೋಧಿಸಿ ಸಮಾನತೆಯ ನಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು. ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಗುಣಗಳೊಂದಿಗೆ ಆದರ್ಶದ ಬದುಕನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರೇರಣೆ ನೀಡಿದರು.ಪಟ್ಟಣ ಸಮೀಪದ ತಂಗಲಿ ತಾಂಡ್ಯವು ನನ್ನ ಗ್ರಾಮ ಆಗಿರುವುದು ತಮಗೆ ಸಂತಸ ತಂದಿದೆ. ಯುವ ಸಮೂಹವು ಛಲ ಮತ್ತು ಗುರಿ ಹೊಂದಿದ್ದಲ್ಲಿ ದೇಶಕಟ್ಟಲು ಸಾಧ್ಯ.. ಜಾತಿ ಪದ್ಧತಿ ಅಳಿಸಿ ಹೊಸ ವ್ಯವಸ್ಥೆ ನಿರ್ಮಾಣಕ್ಕೆ ನಾಂದಿ ಹಾಡಬೇಕು. ಯುವಪೀಳಿಗೆಯು ಸಮಯಕ್ಕೆ ಹೆಚ್ಚು ಮಹತ್ವ ನೀಡಿದರೆ ಭವಿಷ್ಯದ ದಿನಗಳು ಉತ್ತಮಗೊಳ್ಳುತ್ತವೆ. ನ್ಯಾಯಯುತ ಸಂಘಟಿತ ಹೋರಾಟಕ್ಕೆ ವಿದ್ಯಾರ್ಥಿ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಕಷ್ಟು ಪರಿಶ್ರಮಪಡುತ್ತಾರೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾರ್ಥಿ ಜೀವನವನ್ನು ಉತ್ತಮ ಪಡಿಸಿಕೊಂಡು, ತಮ್ಮ ಪೋಷಕರು ಮತ್ತು ಕಾಲೇಜಿಗೆ ಕೀರ್ತಿ ತಂದರೆ ಕಾಲೇಜಿನ ಗೌರವ ಹೆಚ್ಚಲಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎ. ರಾಜಣ್ಣ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗಳು ಬೆಳಕಿಗೆ ಬರಲು ಇಂತಹ ಸಾಂಸ್ಕೃತಿಕ ವೇದಿಕೆಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಶಿಕ್ಷಣ ಪಡೆಯುವಂತಾಗಬೇಕು. ಪೋಷಕರು ಎಲ್ಲ ರೀತಿಯ ಸವಲತ್ತು ಒದಗಿಸಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿ ಜೀವನದಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ರ್‍ಯಾಂಕ್ ಪಡೆದ 18 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದವು.
ಸಾಂಸ್ಕೃ ತಿಕ ವೇದಿಕೆ ಸಂಚಾಲಕ ಎಸ್. ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಜಿ. ತಿಮ್ಮರಾಜು, ರೇಂಜರ್ಸ್ ಲೀಡರ್ ಎಚ್.ಆರ್. ಜ್ಯೋತಿ, ಯುವರೆಡ್ ಕ್ರಾಸ್ ಘಟಕದ ವೈ.ಜಿ. ಸಂಪತ್‍ಕುಮಾರ್, ಎ. ನಾಗೇಶ್, ಎನ್‍ಎಸ್‍ಎಸ್ ಘಟಕದ ಎಚ್.ಎಸ್. ಸವಿತಾ, ಬಸವರಾಜ್ ಭಂಡಾರಿ, ಗೋಪಿನಾಥ್ ಹಾಗೂ ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಇದ್ದರು.