ಆನ್‌ಲೈನ್ ಮೂಲಕವೂ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ: ತಾಪಂ ಇಒ

KannadaprabhaNewsNetwork | Published : Oct 25, 2024 12:50 AM

ಸಾರಾಂಶ

ಮಹಿಳಾ ಭಾಗವಹಿಸುವಿಕೆಯನ್ನು ಕನಿಷ್ಠ ಶೇ.60 ಪ್ರತಿಶತಕ್ಕೆ ಹೆಚ್ಚಿಸುವ ಕುರಿತು ಎಂದು ತಿಳಿಸುವ ಕಾರ್ಯ ನಡೆದಿದೆ.

ಹರಪನಹಳ್ಳಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿಗಳ ಬೇಡಿಕೆ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಪಿಡಿಒ, ಪಂಚಾಯಿತಿ ಸಿಬ್ಬಂದಿ ಹಾಗೂ ನರೇಗಾ ಸಿಬ್ಬಂದಿಯು ಬೇಡಿಕೆ ಪೆಟ್ಟಿಗೆ ಜತೆಗೆ ಆನ್‌ಲೈನ್ ಮೂಲಕವೂ ಡಿಮಾಂಡ್ ತೆಗೆದುಕೊಳ್ಳಲಾಗುತ್ತಿದೆ ಎಂದು ಹರಪನಹಳ್ಳಿ ತಾಪಂ ಇಒ ಚಂದ್ರಶೇಖರ್ ವೈ.ಎಚ್. ಮಾಹಿತಿ ನೀಡಿದ್ದಾರೆ.

ತಾಲೂಕಿನ ಎಲ್ಲ 37 ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸ್ವೀಕರಿಸಲಾಗುತ್ತಿದ್ದು, ಈ ಕುರಿತು ಮನೆಮನೆಗೆ ಭೇಟಿ ನೀಡಿದ ವೇಳೆ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೆಲಸ ಖಾತರಿಯಾಗಿದ್ದು, ಗಂಡು ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ ₹349 ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯಗಳು ಮತ್ತು ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50 ರಿಯಾಯಿತಿ, ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳು, ಅಕುಶಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರುಗಳಿಗೆ ನಿರ್ವಹಿಸುವ ಕೆಲಸಕ್ಕೆ/ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ. 10 ಕೆಲಸ ಪ್ರಮಾಣದಲ್ಲಿ ರಿಯಾಯಿತಿ, ಮಹಿಳಾ ಭಾಗವಹಿಸುವಿಕೆಯನ್ನು ಕನಿಷ್ಠ ಶೇ.60 ಪ್ರತಿಶತಕ್ಕೆ ಹೆಚ್ಚಿಸುವ ಕುರಿತು ಎಂದು ತಿಳಿಸುವ ಕಾರ್ಯ ನಡೆದಿದೆ. ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಉಚಿತ ಸಹಾಯವಾಣಿ ಸಂಖ್ಯೆ 8277506000 ಕೂಡ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಗ್ರಾಪಂ ಮಟ್ಟದಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ " ಅಭಿಯಾನವು ಕಾಯಕ ಬಂಧುಗಳು, ತಾಂಡಾ ರೋಜಗಾರ್ ಮಿತ್ರರು, ಗ್ರಾಮ ಕಾಯಕ ಮಿತ್ರರು ಬಿಎಫ್‌ಟಿಗಳು, ತಾಂತ್ರಿಕ ಸಹಾಯಕ ಅಭಿಯಂತರರು, ಅನುಷ್ಠಾನ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯಿಂದ ಆರಂಭಿಸಲಾಗಿದೆ. ಆನ್‌ಲೈನ್ ಮೂಲಕವೂ ಕಾಮಗಾರಿಗಳ ಬೇಡಿಕೆ ಸಂಗ್ರಹ ಮಾಡಲಾಗುತ್ತಿದೆ ಎನ್ನುತ್ತಾರೆ ತಾಪಂ ಇಒ ಚಂದ್ರಶೇಖರ್ ವೈ.ಎಚ್.

ನರೇಗಾ ಸಿಬ್ಬಂದಿ ಪ್ರತಿ ಮನೆಗೂ ಭೇಟಿ ನೀಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು "ಬೇಡಿಕೆ ಪೆಟ್ಟಿಗೆ "ಯನ್ನು ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಮತ್ತು ಹಾಲಿನ ಕೇಂದ್ರಗಳಲ್ಲಿ ಸ್ಥಾಪಿಸಿ ಪ್ರತಿದಿನ ಸ್ವೀಕೃತವಾದ ಬೇಡಿಕೆಗಳನ್ನು ಅ.31ರವರೆಗೆ ಅರ್ಜಿನ್ನು ಸಂಗ್ರಹಿಸುತ್ತಿದ್ದು, ಮೊಬೈಲ್ ಅಪ್ಲಿಕೇಶನ್ ಕೂಡ ಸಿದ್ಧವಾಗಿದೆ. ಕ್ಯೂರ್ ಕೋಡ್ ಮೂಲಕವೂ ಸಾರ್ವಜನಿಕರು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ಬೇಡಿಕೆ ಸಲ್ಲಿಸಬಹುದು ಎನ್ನುತ್ತಾರೆ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್.

Share this article