ರಾಮನಗರ: ವೈದಿಕ ಸಂಸ್ಕೃತಿಯೇ ಶ್ರೇಷ್ಠ ಸಂಸ್ಕೃತಿ ಎಂದು ಮರುಬಿಂಬಿಸುವ ಯತ್ನಗಳು ನಡೆಯುತ್ತಿವೆ. ಜಾನಪದ ಸ್ಥಿತ್ಯಂತರವಾಗಿ ಹಿಂದೂ ಧರ್ಮದ ತಕ್ಕೆಗೆ ಬಂದು ಬಿಟ್ಟಿದೆ. ಸ್ಥಿತ್ಯಂತರವನ್ನು ತಪ್ಪು ಎನ್ನುವ ಮನಸ್ಥಿತಿಯೂ ಮಾಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದರು.
ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಜಾನಪದ ಸಾಹಿತಿ ಡಾ.ಎಂ.ಬೈರೇಗೌಡರ ಸಂಪಾದಕತ್ವದ "ಜಾನಪದ ತಿಜೋರಿ " ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, 1990ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡಿದೆ. ಜಾಗತೀಕರಣದಿಂದಾಗಿ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ. ಜಾಗತೀಕರಣದ ನಂತರದ ಆರ್ಥಿಕತೆಯ ಬದಲಾವಣೆ ಬಳಸಿಕೊಂಡು ಕೋಮುವಾದವೂ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಅಯೋಧ್ಯೆ ವಿಚಾರದಲ್ಲಿ ಅಡ್ವಾಣಿ ನೇತೃತ್ವದಲ್ಲಿ ರಥಯಾತ್ರೆಯೂ ನಡೆಯಿತು. ಇದು ಹಿಂದುತ್ವದ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಇವುಗಳ ಪರಿಣಾಮ ಜಾನಪದ ಹಾಗೂ ಆಚರಣೆಗಳು ತೀವ್ರವಾಗಿ ಬದಲಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಭಾರತದಲ್ಲಿ ಜಾನಪದ, ಮೌಖಿಕ ಸಾಹಿತ್ಯ ಮತ್ತು ವಾಕ್ ಸ್ವಾತಂತ್ರ ಕಳೆದುಕೊಂಡರೆ ಭಾರತ ಸೃಜನಶೀಲವಾಗಿ ಸಾಯುತ್ತದೆ. ಮಹಾಭಾರತ ಮತ್ತು ರಾಮಾಯಣದ ಅನೇಕ ಪ್ರಾಕಾರಗಳಿವೆ. ವ್ಯಾಸ ಮುನಿ ಬರೆದ ಮಹಾಭಾರತದ ಶ್ಲೋಕಗಳ ಜೊತೆಗೆ ದೇಶದ ಅನೇಕ ಕಡೆ ಅಲ್ಲಿನ ಸ್ಥಳೀಯ ವಿಚಾರಗಳನ್ನು ಸೇರಿಸಿದ್ದಾರೆ. ಇದು ಭಾರತ ಜನರ ಸೃಜನ ಶೀಲತೆಯ ಸಂಕೇತ. ಇದು ಭಾರತ ದೇಶದ ಚಂದ. ಆದರೆ, ಇದು ವಿದೇಶಿಯರಿಗೆ ಅರ್ಥವೇ ಆಗಲ್ಲ. ಸಂಸ್ಕೃತ ಭಾಷೆಯಲ್ಲಿರುವ ರಾಮಾಯಣವನ್ನು ಮೊಟ್ಟ ಮೊದಲಿಗೆ ದೇಶೀ ಭಾಷೆಯಲ್ಲಿ ತರ್ಜುಮೆಯಾಗಿದ್ದು ಕನ್ನಡದಲ್ಲಿ ಎಂದು ಹೇಳಿದರು.ಸರ್ಕಾರ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಎಷ್ಟೆಂಬುದನ್ನು ಮೊದಲು ಎಲ್ಲರೂ ಅರಿಯಬೇಕು. ಜಾಗತೀಕರಣದ ಬಳಿಕ ಸಾಮಾಜಿಕ ನ್ಯಾಯ ಅಪ್ರಸ್ತುತ ಆಗಿಬಿಟ್ಟಿದೆ. ಇಲ್ಲದಿರುವ ಉದ್ಯೋಗದಲ್ಲಿ ಮೀಸಲಾತಿಗೆ ಹೋರಾಟಗಳು ನಡೆಯುತ್ತಿವೆ. ದೆಹಲಿ ಬಳಿಯ ಫರಿದಾಬಾದ್, ನೋಯಿಡಾ, ಗುರುಗಾಂವ್ (ಎನ್‌ಸಿಟಿ ಕ್ಷೇತ್ರ) ಸ್ಥಳಗಳಲ್ಲಿ 12 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ ಆ ಭಾಗದ ಹರಿಯಾಣ, ದೆಹಲಿ ಮತ್ತು ಕೇಂದ್ರ ಸರ್ಕಾರಗಳಿಂದ ಕೇವಲ 400 ಉದ್ಯೋಗ ಮಾತ್ರ ಸೃಷ್ಟಿಯಾಗಿದೆ. ಹೀಗಾಗಿ ಮೀಸಲಾತಿ ಹೋರಾಟಕ್ಕೆ ಅರ್ಥವೇ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗ ಎಂಬ ನಿಯಮವಿರುವ ಸರೋಜಿನಿ ಮಹಿಷಿ ವರದಿ ಜಾರಿಯಾದರೂ ಉದ್ಯೋಗಗಳು ಎಲ್ಲಿವೆ? ವರದಿಯಲ್ಲಿ ಖಾಸಗಿ ವಲಯದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಎಲ್ಲವೂ ಸರ್ಕಾರಿ ಉದ್ಯೋಗಗಳಿಗೆ ಸೀಮಿತವಾಗಿದೆ ಎಂದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ ಮಾತನಾಡಿ, ಗ್ರಂಥಾಲಯಗಳು ಹೆಚ್ಚಿರುವ ದೇಶಗಳು ಹೆಚ್ಚು ಪ್ರಗತಿ ಸಾಧಿಸಿವೆ ಹಾಗೂ ಯಾವ ದೇಶದಲ್ಲಿ ಹೆಚ್ಚು ಪತ್ರಿಕೆಗಳನ್ನು ಓದುವರೋ ಆ ದೇಶ ಭೌತಿಕವಾಗಿ ಅಭಿವೃದ್ಧಿಯಾಗಿವೆ ಎನ್ನಲಾಗಿದೆ. ಆದರೆ ಇಂದು ಪತ್ರಿಕೋದ್ಯಮದ ಬೇರುಮಟ್ಟದ ಮಾಹಿತಿಯನ್ನೇ ತಿಳಿದುಕೊಳ್ಳದ ವಿದ್ಯಾರ್ಥಿಗಳಿದ್ದಾರೆ ಎಂದು ವಿಷಾದಿಸಿದರು.ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್ ಮಾತನಾಡಿದರು. ಪತ್ರಿಕೆ ಸಂಪಾದಕ ಡಾ.ಎಂ.ಬೈರೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
20ಕೆಆರ್ ಎಂಎನ್ .ಜೆಪಿಜಿರಾಮನಗರ ತಾಲೂಕಿನ ಕೆರೆಮೇಗಳದೊಡ್ಡಿಯಲ್ಲಿರುವ ಮುದ್ದುಶ್ರೀ ದಿಬ್ಬದಲ್ಲಿ ಜಾನಪದ ಸಾಹಿತಿ ಡಾ.ಎಂ.ಬೈರೇಗೌಡರ ಸಂಪಾದಕತ್ವದ "ಜಾನಪದ ತಿಜೋರಿ " ಮಾಸ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು.