ಕಾರವಾರ: ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿನ ಎಲ್ಲ ಸೇತುವೆಗಳ ದೃಡತೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು.ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿರುವ ಗುಡ್ಡಕುಸಿತ ಪ್ರದೇಶಗಳ ವಿವರಗಳನ್ನು ಮತ್ತು ಅಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಂಬಂಧಪಟ್ಟ ಹೆದ್ದಾರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಪ್ರದೇಶದಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು, ಸ್ಪಾಟರ್ ಗಳನ್ನು ನೇಮಕ ಮಾಡಿ ನಿರಂತರವಾಗಿ ಗುಡ್ಡ ಕುಸಿತದ ಸ್ಥಳಗಳನ್ನು ಪರಿಶೀಲನೆ ನಡೆಸಬೇಕು, ಅಗತ್ಯವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ಬದಲಾವಣೆ ಮಾಡುವ ಮೂಲಕ ಯಾವುದೇ ಹಾನಿಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಅನಾಹುತವಾದಲ್ಲಿ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದರು.
ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನೀಡಿರುವ ಪರಿಹಾರ ಕ್ರಮಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕು, ಸ್ಪೀಡ್ ಬ್ರೇಕರ್‌ಗಳು, ಅಗತ್ಯ ಸೂಚನಾ ಫಲಗಳು, ಎಚ್ಚರಿಕಾ ಫಲಕಗಳು, ರಾತ್ರಿ ವೇಳೆ ಎಚ್ಚರಿಕೆ ನೀಡುವ ರಿಫ್ಲೆಕ್ಟರ್‌ಗಳ ನ್ನು ಅಳವಡಿಸಬೇಕು, ಬೀದಿ ದೀಪಗಳ ಮತ್ತು ಹೈಮಾಸ್ಟ್ ದೀಪಗಳ ಅಳವಡಿಕೆ ಮಾಡಬೇಕು, ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡೆತಡೆಯಾದಲ್ಲಿ ತೆರವುಗೊಳಿಸಲು ಅಗತ್ಯ ಉಪಕರಣಗಳು, ಕ್ರೇನ್, ಆಂಬುಲೆನ್ಸ್‌ಮತ್ತು ಅಗತ್ಯ ಸಿಬ್ಬಂದಿಯನ್ನು ಸಿದ್ದವಾಗಿಟ್ಟುಕೊಂಡಿರಬೇಕು ಎಂದರು.ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರಂತರವಾಗಿ ವಾಹನಗಳನ್ನು ತಪಾಸಣೆ ನಡೆಸಬೇಕು, ಗೂಡ್ಸ್ ವಾಹನಗಳಲ್ಲಿ ಸಾರ್ವಜನಿಕರನ್ನು ಕರೆದೊಯ್ಯುವುದರ ಬಗ್ಗೆ ಮತ್ತು ಹೆಚ್ಚು ಭಾರದ ವಾಹನಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಉಪ ವಿಭಾಗಾಧಿಕಾರಿ ಕನಿಷ್ಕ ಮತ್ತಿತರರು ಇದ್ದರು.