ಕನ್ನಡಪ್ರಭ ವಾರ್ತೆ ತುಮಕೂರುಮುಡಾದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಒತ್ತಾಯಿಸಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮುಡಾ ಹಗರಣದ ಹಿಂದೆ ದೊಡ್ಡ ಜಾಲವಿದೆ. ಎಲ್ಲರೂ ಗ್ಯಾಂಗ್ ಮಾಡಿಕೊಂಡು ಹಗರಣ ಮಾಡಿದ್ದಾರೆ. ರಾಜ್ಯ ಪೊಲೀಸರು ಈ ಹಗರಣವನ್ನು ಮುಚ್ಚಿ ಹಾಕಲಿದ್ದಾರೆ. ಮುಖ್ಯಮಂತ್ರಿ ವಿರುದ್ಧವೇ ತನಿಖೆ ಮಾಡಿ ಅವರನ್ನು ಆರೋಪಿ ಮಾಡುವಂಥಾ ಸಾಹಸವನ್ನು ರಾಜ್ಯ ಪೊಲೀಸರು ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.ಇದು ಸಣ್ಣಪುಟ್ಟ ಹಗರಣವಲ್ಲ, ಇಲ್ಲಿ 5 ಸಾವಿರ ಕೋಟಿ ರು.ಗೂ ಹೆಚ್ಚಿನ ಅಕ್ರಮವಾಗಿದೆ. ಇದರಲ್ಲಿ ಮುಖ್ಯಮಂತ್ರಿಯವರ ಪತ್ನಿ ಪಾರ್ವತಮ್ಮ ಅವರೂ ನೇರ ಪಾಲುದಾರರು. ಮುಖ್ಯಮಂತ್ರಿಯವರ ಆದೇಶವಿಲ್ಲದೆ ಇದು ಆಗುವುದಿಲ್ಲ. 1992ರಲ್ಲಿ ಭೂಮಿ ವಶಕ್ಕೆ ಪಡೆಯುವ ಕೆಲಸವನ್ನು ಮುಡಾ ಶುರು ಮಾಡಿದೆ. ಆದರೆ 2004ಲ್ಲಿ ಪಾರ್ವತಮ್ಮ ಅವರ ಸೋದರ ಭೂಮಿ ಖರೀದಿ ಮಾಡಿದ್ದಾರೆ. ಮುಡಾ ಸ್ವಾಧೀನದಲ್ಲಿದ್ದ ಜಾಗವನ್ನು ಅವರು ಹೇಗೆ ಖರೀದಿ ಮಾಡಿದರು ಎಂದು ಪ್ರಶ್ನಿಸಿದರು.2009-10ರಲ್ಲಿ ಅವರು ತಮ್ಮ ಸೋದರಿಗೆ ಇದನ್ನು ಕಾಣಿಕೆಯಾಗಿ ನೀಡಿದಾಗಲೂ ಆರ್.ಟಿ.ಸಿ ಮುಡಾದಲ್ಲಿಯೇ ಇತ್ತು. ಇದು ಎಲ್ಲರಿಗೂ ಸಾಧ್ಯವೆ? 2022 ರ ಜನವರಿ 12 ರಂದು ಕ್ರಯಪತ್ರ ಆಗಿದ್ದು, 1991ರ ಪ್ರೋತ್ಸಾಹದಾಯಕ ಯೋಜನೆಯಡಿ ಎಂದು ಉಲ್ಲೇಖಿಸಿ 14 ನಿವೇಶನಗಳನ್ನು ಮಂಜೂರು ಮಾಡಿದ್ದಾರೆ. ನಿಯಮಗಳ ಪ್ರಕಾರ ಪಾರ್ವತಮ್ಮ ಅವರಿಗೆ ಕೊಡಬೇಕಾದುದು ಕೇವಲ 2 ನಿವೇಶನ. ಅದರ ಬದಲಿಗೆ 14 ನಿವೇಶನ ಕೊಟ್ಟಿದ್ದಾರೆ. ಇದಕ್ಕೆ ಅಧಿಕಾರದ ದುರ್ಬಳಕೆ ಎನ್ನದೆ ಇನ್ನೇನು ಅನ್ನಬೇಕು?. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಹೇಳಿದರು.ಒಂದೊಂದು ನಿವೇಶನದ ಬೆಲೆ 2 ಕೊಟಿ ರು. ಮೀರುತ್ತದೆ. ಆದಾಗ್ಯೂ 65 ಕೋಟಿ ರು. ನಿವೇಶನ ಬೇಕು ಎಂದು ಸಮಾಜವಾದಿಯಾದ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಇದು ಹಗಲು ದರೋಡೆಯಲ್ಲವೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಅರ್ಜಿ ಸಲ್ಲಿಸಿದ ನಂತರ ಮುಡಾ ಅಧ್ಯಕ್ಷ ಮತ್ತು ಆಯುಕ್ತರು 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಿಂದ ಮುಡಾಗೆ ನಷ್ಟವಾಗಿದೆ 50:50 ಅನುಪಾತದಲ್ಲಿ ಹಂಚಿಕೆ ಮಾಡುವುದಾದರೆ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆದು ಆದೇಶವಾಗಬೇಕು. ಆದರೆ, ಇಲ್ಲಿ ಅಕ್ರಮವಾಗಿ ಅವರೇ ಹಂಚಿಕೆ ಮಾಡಿದ್ದಾರೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್‌ಗೌಡ, ಹಾಲೇಗೌಡ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಕಾರ್ಯಾಲಯ ಕಾರ್ಯದರ್ಶಿ ಗಣೇಶ್ ಪ್ರಸಾದ್, ಜಿ.ಎಸ್.ನಂದಿನಾಥ್ ಹಾಜರಿದ್ದರು.
ಕೋಟ್..ಈ ಆಸ್ತಿಯ ವಿಚಾರವಾಗಿ ಮುಖ್ಯಮಂತ್ರಿಗಳು 2013ರಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮ ಆಸ್ತಿ ದಾಖಲಾತಿಯಲ್ಲಿ ಉಲ್ಲೇಖಿಸಿಲ್ಲ. ಈ ವಿಚಾರವಾಗಿ ಚುನಾವಣಾ ಆಯೋಗದ ಗಮನಕ್ಕೆ ತರಲು ರಾಜ್ಯ ಬಿಜೆಪಿ ಆಲೋಚನೆ ಮಾಡುತ್ತಿದೆ. ಸುರೇಶ್‌ಗೌಡ, ಶಾಸಕ