ವಿಜೃಂಭಣೆಯಿಂದ ನಡೆದ ಸುಬ್ರಹ್ಮಣ್ಯೇಶ್ವರ ರಥೋತ್ಸವ

KannadaprabhaNewsNetwork |  
Published : Jan 25, 2026, 01:15 AM IST
ಸಿಕೆಬಿ-2 ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯಶ್ವರ ಬ್ರಹ್ಮ ರಥೋತ್ಸವಕ್ಕೆ ಸಿಇಓ ಡಾ.ವೈ.ನವೀನ್ ಭಟ್   ಚಾಲನೆ ನೀಡಿದರು. | Kannada Prabha

ಸಾರಾಂಶ

ಚಿಕ್ಕಬಳ್ಳಾಪುರ ಹೊರ ವಲಲ್ಲ್ಲಿ ಪ್ರತಿ ಮಾಘ ಮಾಸದ ಕುಮಾರಷಷ್ಟಿಯಂದು ಸುಬ್ರಹ್ಮಣ್ಯಶ್ವರ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರ ಹೊರವಲಯದ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯಶ್ವರ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ವಿಜೃಂಭಣೆಯಿಂದ ಶನಿವಾರ ನೆರವೇರಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನವನ್ನು ಪಡೆದು ಹರಕೆಗಳನ್ನು ಅರ್ಪಿಸಿದರು.

ಚಿಕ್ಕಬಳ್ಳಾಪುರ ಹೊರ ವಲಲ್ಲ್ಲಿ ಪ್ರತಿ ಮಾಘ ಮಾಸದ ಕುಮಾರಷಷ್ಟಿಯಂದು ಸುಬ್ರಹ್ಮಣ್ಯಶ್ವರ ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಸುಮಾರು 50 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಹರಕೆ ಸಮರ್ಪಿಸಿ ಅಲ್ಲಿನ ಹುತ್ತಕ್ಕೆ ಹಾಲೆರೆಯುತ್ತಾರೆ.ಮಧ್ಯಾಹ್ನ ನಡೆದ ಬ್ರಹ್ಮ ರಥೋತ್ಸವಕ್ಕೆ ಜಿಪಂ ಸಿಇಒ ಡಾ. ವೈ. ನವೀನ್ ಭಟ್, ತಾಪಂ ಇಒ ಮಂಜುನಾಥ್ ರಥ ಎಳೆಯುವ ಮೂಲಕ ಚಾಲನೆ ನೀಡಿದರು. ಮುಂಜಾನೆಯಿಂದ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿದ್ದರು. ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಪನ್ನೀರು ಪತ್ರೆ, ಬಾಳೆಹಣ್ಣು ಎಸೆದು ದೇವರ ಕೃಪೆಗೆ ಪಾತ್ರರಾದರು.ಜಾತ್ರೆಗೆ ಬಂದ ಭಕ್ತಾದಿಗಳಿಗೆ ಉಪಹಾರ, ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ಹೊನ್ನೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ವಿತರಿಸಿದರು. ಯಾವುದೇ ಕಳ್ಳತನ ಪ್ರಕರಣಗಳು ನಡೆಯದಂತೆ ಗ್ರಾಮಾಂತರ ಪೊಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕ್ಷಣಕ್ಷಣಕ್ಕೆ ಧ್ವನಿವರ್ಧಕಗಳ ಮುಖಾಂತರ ಮಾಹಿತಿ ಕೊಡುತ್ತಿದ್ದರು. ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ ದೇವಾಲಯಗಳಲ್ಲಿ ಬ್ರಹ್ಮ ರಥೋತ್ಸವ ಕಾರ್ಯಕ್ರಮಗಳು ನಡೆದ ನಂತರ ಪ್ರತಿ ವರ್ಷ ಮಾಘ ಮಾಸದಲ್ಲಿ ಷಷ್ಟಿ ಪ್ರಯುಕ್ತ ನಡೆಯುವ ಚಿತ್ರಾವತಿ ಜಾತ್ರೆಯು ವಿಶೇಷತೆಯನ್ನು ಪಡೆದುಕೊಂಡಿದೆ. ಜಾತ್ರೆ ಇನ್ನೂ ಒಂದು ವಾರ ಇದೆ ಎನ್ನುವಾಗ ದನಗಳ ಸಂತೆಯೂ ನಡೆಯುತ್ತದೆ. ಇದರಲ್ಲಿ ರಾಜ್ಯ ಮಾತ್ರವಲ್ಲದೇ ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧೆಡೆಯಿಂದ ರೈತರು ಭಾಗವಹಿಸುತ್ತಿದ್ದರು. ಸಂತೆಯಲ್ಲಿ ತಾವು ಚೆನ್ನಾಗಿ ಸಾಕಿದ ದನಗಳನ್ನು ಮಾರಾಟ ಮಾಡಿ ಆರ್ಥಿಕ ಲಾಭವನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ದನಗಳ ಜಾತ್ರೆ ನಡೆಯದಿರುವುದು ಸ್ವಲ್ಪ ಮಟ್ಟಿಗೆ ಜಾತ್ರೆಯ ಮೇಲೆ ಪ್ರಭಾವ ಬೀರಿದೆ.

ನೂರಾರು ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಾ ಬಂದಿರುವ ಚಿತ್ರಾವತಿ ಜಾತ್ರಾ ಮಹೋತ್ಸವಕ್ಕೆ ಜಾನುವಾರುಗಳೇ ಪ್ರಮುಖ ಆಕರ್ಷಣೆ. ಈ ಬಾರಿ ದನಗಳ ಜಾತ್ರೆಯ ನಿಷೇಧದಿಂದ ವ್ಯಾಪಾರ ವಹಿವಾಟುಗೂ ತೀವ್ರ ಪೆಟ್ಟಾಗಿದ್ದು, ವ್ಯಾಪಾರಸ್ಥರಿಗೆ ಬಂದ ದಾರಿಗೆ ಸುಂಕವಿಲ್ಲದಂತಾಗಿದೆ.ಪ್ರತೀ ವರ್ಷದಂತೆ ಈ ವರ್ಷವೂ ಚಿತ್ರಾವತಿ ಜಾತ್ರೆಯಲ್ಲಿ ಬುರುಗು ಹಾಗೂ ಸಿಹಿ ತಿಂಡಿಯ ಅಂಗಡಿಯನ್ನು ಹಾಕಿದ್ದೇನೆ. ದನಗಳ ಜಾತ್ರೆ ಇದ್ದರೆ ಮಾತ್ರವೇ ಜಾತ್ರೆಯಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. ಆದರೆ ಈ ಬಾರಿ ದನಗಳ ಜಾತ್ರೆ ನಡೆಯದೆ ಇರುವುದರಿಂದ ಐದಾರು ಸಾವಿರ ಖರ್ಚು ಮಾಡಿಕೊಂಡು ಇಲ್ಲಿಗೆ ಬಂದಿರುವ ವೆಚ್ಚವೂ ನಮಗೆ ಸಿಗುವುದಿಲ್ಲ. ಅಂಗಡಿ ತೆರೆದು ಎರಡು ದಿನಗಳಾದರೂ ವ್ಯಾಪಾರವೇ ಇಲ್ಲವಾಗಿದ್ದು, ಜಾತ್ರೆಯೂ ನೀರಸವಾಗಿ ಸಾಗಿದೆ ಎಂದು ಬುರುಗು ಹಾಗೂ ಸಿಹಿ ತಿಂಡಿಗಳ ವ್ಯಾಪಾರಿಗಳ ಅಳಲಾಗಿತ್ತು.

ಸಿಕೆಬಿ-2 ವಿಜೃಂಭಣೆಯಿಂದ ನಡೆದ ಇತಿಹಾಸ ಪ್ರಸಿದ್ಧ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯಶ್ವರ ಬ್ರಹ್ಮ ರಥೋತ್ಸವಕ್ಕೆ ಸಿಇಓ ಡಾ.ವೈ.ನವೀನ್ ಭಟ್ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್