ಮೆಕ್ಕೆಜೋಳ ಮಾರಿದ ಮೇಲೆ ಸಹಾಯಧನ ಘೋಷಣೆ, ರೈತರ ಆಕ್ರೋಶ

KannadaprabhaNewsNetwork |  
Published : Jan 16, 2026, 01:00 AM IST
ಸಸಸ | Kannada Prabha

ಸಾರಾಂಶ

ಮೆಕ್ಕೆಜೋಳದ ದರ ಮಾರುಕಟ್ಟೆಯಲ್ಲಿ ₹600-700 ಕುಸಿದಿದೆ. ಕಳೆದ ವರ್ಷ ₹2200ಗೆ ಮಾರಿದ್ದ ರೈತರು ಈ ವರ್ಷ ₹1500 ಯಿಂದ ₹1900ಗೆ ಮಾರಾಟ ಮಾಡಬೇಕಾಗಿ ಬಂತು

ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಜ್ಯಾದ್ಯಂತ ಈ ವರ್ಷ ವಿಪರೀತ ಮೆಕ್ಕೆಜೋಳ ಬೆಳೆದಿದ್ದರಿಂದ ಬೆಲೆಯಲ್ಲಿ ಭಾರಿ ಕುಸಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರೂ ಬೆಂಬಲ ಬೆಲೆ ಕೇಂದ್ರ ತೆರೆಯಲೇ ಇಲ್ಲ. ಈಗ ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರ ನಷ್ಟ ತುಂಬಿಕೊಡಲು ಸಹಾಯಧನ ಘೋಷಣೆ ಮಾಡಿದ್ದು, ಬಹುತೇಕ ರೈತರು ಮಾರಿದ ಮೇಲೆ ಘೋಷಣೆಯಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಶೇ.90ರಷ್ಟು ರೈತರು ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಹೀಗಾಗಿ, ಅವರಿಗೆ ಸರ್ಕಾರ ಘೋಷಣೆ ಮಾಡಿರುವ ಸಹಾಯಧನದ ಲಾಭ ದೊರೆಯದಂತಾಗಿದೆ.

ಏನಿದು ಸಹಾಯಧನ?: ಮೆಕ್ಕೆಜೋಳದ ದರ ಮಾರುಕಟ್ಟೆಯಲ್ಲಿ ₹600-700 ಕುಸಿದಿದೆ. ಕಳೆದ ವರ್ಷ ₹2200ಗೆ ಮಾರಿದ್ದ ರೈತರು ಈ ವರ್ಷ ₹1500 ಯಿಂದ ₹1900ಗೆ ಮಾರಾಟ ಮಾಡಬೇಕಾಗಿ ಬಂತು. ಕೇಂದ್ರ ಸರ್ಕಾರ ₹2400 ಬೆಂಬಲ ಬೆಲೆ ಘೋಷಣೆ ಮಾಡಿದೆಯಾದರೂ ಖರೀದಿ ಕೇಂದ್ರ ತೆರೆಯಲೇ ಇಲ್ಲ.

ಪಡಿತರ ವ್ಯವಸ್ಥೆಯಲ್ಲಿ ಮೆಕ್ಕೆಜೋಳ ವಿತರಣೆ ಇಲ್ಲವಾದ್ದರಿಂದ ಖರೀದಿ ಮಾಡಿದ ಮೆಕ್ಕೆಜೋಳವನ್ನು ರಾಜ್ಯ ಸರ್ಕಾರ ಎಲ್ಲಿ ವಿತರಣೆ ಮಾಡಬೇಕು ಎನ್ನುವ ಸಮಸ್ಯೆಯಿಂದ ಬೆಂಬಲ ಬೆಲೆ ಕೇಂದ್ರವನ್ನು ಕಳೆದೆರಡು ವರ್ಷಗಳಿಂದ ತೆರೆಯುತ್ತಲೇ ಇಲ್ಲ.

ಈ ನಡುವೆ ಹಾಲು ಒಕ್ಕೂಟಗಳಿಂದ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವಂತೆ ಆದೇಶಿಸಲಾಯಿತಾದರೂ ಇದು ಕೆಲವೇ ಕೆಲವು ರೈತರಿಗೆ ಮಾತ್ರ ಅನುಕೂಲವಾಯಿತು. ಅದು ಧಾರವಾಡದಲ್ಲಿ ಖರೀದಿ ಮಾಡಿದ್ದರಿಂದ ಕೊಪ್ಪಳ ಜಿಲ್ಲೆಯ ರೈತರಿಗೆ ಅನುಕೂಲವಾಗಲೇ ಇಲ್ಲ.

ಸಹಾಯಧನ ಘೋಷಣೆ: ಈಗ ರಾಜ್ಯ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರಿಗೆ ಸಹಾಯಧನ ಘೋಷಣೆ ಮಾಡಿದೆ. ಎಪಿಎಂಸಿ ಮೂಲಕ ಮಾರಾಟ ಮಾಡುವ ರೈತರಿಗೆ ಪ್ರತಿಕ್ವಿಂಟಲ್ ಗೆ ಷರತ್ತಿನ ಅನ್ವಯ ₹250 ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈಗಾಗಲೇ ಬಹುತೇಕ ರೈತರು ಮೆಕ್ಕೆಜೋಳ ಮಾರಾಟ ಮಾಡಿದ್ದಾರೆ. ಈಗ ಮಾರಾಟ ಮಾಡುವ ರೈತರಿಗೆ ಮಾತ್ರ ಇದರ ಲಾಭ ದೊರೆಯಲಿದೆ.

ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ 11 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಮಾರಾಟವಾಗಿದೆ. ಇದು ಎಪಿಎಂಸಿಯಲ್ಲಾಗಿರುವ ಲೆಕ್ಕಾಚಾರ. ಎಪಿಎಂಸಿಯ ಹೊರಗೂ ಸಹ ಖರೀದಿ ನಡೆಯುತ್ತಿರುವುದು ಅದ್ಯಾವುದು ಲೆಕ್ಕ ಸಿಗುವುದಿಲ್ಲ.

ಕಳೆದ ವರ್ಷ 15 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಕೊಪ್ಪಳ ಜಿಲ್ಲೆಯಲ್ಲಿ ಮಾರಾಟವಾಗಿದೆ. ಈ ವರ್ಷ ಇನ್ನೂ 5ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬರುವ ನಿರೀಕ್ಷೆಯಲ್ಲಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ರೈತರು ನೋಂದಣಿ: ಸಹಾಯಧನ ಪಡೆಯಲು ರೈತರು ಕೊಪ್ಪಳದಲ್ಲಿ ನೋಂದಣಿ ಮಾಡಿಕೊಂಡಿದ್ದು, ಇದುವರಗೂ ಕೇವಲ 323 ರೈತರು 6447 ಕ್ವಿಂಟಲ್ ಮಾರಾಟದ ಕುರಿತು ನೋಂದಣಿ ಮಾಡಿಕೊಂಡಿದ್ದಾರೆ. ಕೋಳಿ ಫಾರ್ಮ್ ನವರು ಸಹ ಬೆಂಬಲ ಬೆಲೆಯಡಿ ₹3224 ಕ್ವಿಂಟಲ್ ಖರೀದಿಗೆ ಸೂಚನೆ ನೀಡಲಾಗಿದೆ.

ರೈತರು ಬೆಳೆದ ಮಕ್ಕೆಜೋಳ ಬೆಳೆ ಬೆಂಬಲ ಬೆಲೆ ಕೇಂದ್ರವನ್ನು ತೆರೆಯದಿದ್ದರೂ ಪರವಾಗಿಲ್ಲ, ಸಹಾಯಧನ ಬೇಗನೆ ಘೋಷಣೆ ಮಾಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಹಾಲು ಒಕ್ಕೂಟಗಳಿಗೂ ಸ್ಥಳೀಯವಾಗಿಯೇ ಖರೀದಿಸುವಂತಾಗಬೇಕು ಎಂದು ವರ್ತಕ ಭೋಜಪ್ಪ ಕುಂಬಾರ ತಿಳಿಸಿದ್ದಾರೆ.

ಮೆಕ್ಕೆಜೋಳ ಬೆಳೆದ ನಮಗೆ ನ್ಯಾಯಯುತವಾಗಿ ಬೆಲೆ ಸಿಗಲೇ ಇಲ್ಲ. ಹೀಗಾಗಿ, ನಷ್ಟ ಅನುಭವಿಸಿದ್ದೇವೆ. ಈಗ ಸಹಾಯಧನ ಘೋಷಣೆ ಮಾಡಿದ್ದು, ಅದು ತಡವಾಗಿದ್ದರಿಂದ ರೈತರಿಗೆ ಸಿಗದಂತಾಗಿದೆ ಎಂದು ರೈತ ದೇವರಡ್ಡಿ ಯರೆಹಂಚಿನಾಳ ತಿಳಿಸಿದ್ದಾರೆ.

ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿ

ಕೊಪ್ಪಳ: 2025-26ನೇ ಸಾಲಿಗೆ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲಾಗುವುದು ಎಂದು ಕೊಪ್ಪಳ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

2025-26ನೇ ಸಾಲಿಗೆ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳದ ಮಾದರಿ ಧಾರಣೆಯು ಏನೇ ಇದ್ದರೂ ಸಹ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 250 ರಂತೆ ಸರ್ಕಾರದಿಂದ ಬೆಲೆ ವ್ಯತ್ಯಾಸ ಪಾವತಿಸಲಾಗುವದು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಥವಾ ಉಪ ಮಾರುಕಟ್ಟೆ ಪ್ರಾಂಗಣಗಳ ಜತೆಗೆ ಕುಕನೂರು ತಾಲೂಕಿನ ಪಿಎಸಿಎಸ್ ಮಂಗಳೂರು ಮೊಸಂ 9945631054, ಯಲಬುರ್ಗಾ ತಾಲೂಕಿನ ಪಿಎಸಿಎಸ್ ಯಲಬುರ್ಗಾ ಮೊಸಂ 9611465666, ಕೊಪ್ಪಳ ತಾಲೂಕಿನ ಪಿಎಸಿಎಸ್ ಅಳವಂಡಿ ಮೊಸಂ 9945809338, ಈ ಮೂರು ಸ್ಥಳಗಳಲ್ಲಿಯೂ ಸಹ ರೈತರ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ.

ಆದ್ದರಿಂದ ಕೊಪ್ಪಳ ಜಿಲ್ಲೆಯ ಎಲ್ಲ ರೈತ ಬಾಂಧವರು ಈ ಎಲ್ಲ ಸ್ಥಳಗಳಲ್ಲಿ ಆಧಾರ ಕಾರ್ಡ್‌, ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ಎನ್.ಇ.ಎಂ.ಎಲ್ (NEML) ತಂತ್ರಾಂಶದಲ್ಲಿ ಬಯೋಮೆಟ್ರಿಕ ಮೂಲಕ ನೋಂದಣೆ ಮಾಡಿಸಿಕೊಂಡು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಯುಎಂಪಿ ವೇದಿಕೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡುವಂತೆ ಜಿಲ್ಲೆಯ ರೈತ ಬಾಂಧವರಲ್ಲಿ ಈ ಮೂಲಕ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಮತ್ತು ಶಾಖಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕೊಪ್ಪಳ ಇವರಿಗೆ ಸಂಪರ್ಕಿಸುವಂತೆ ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿ ಉತ್ಸವ ನಾಡಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ: ಜಮೀರ್ ಅಹಮದ್‌ ಖಾನ್
ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ