ಶಿವಮೊಗ್ಗ: ಅಡಕೆ ಬೆಳೆಗಾರರನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಡಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸಿ, ಆತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟುಕುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿರುವುದು ತೋಟಗಾರಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ತಿಂಗಳಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘವು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸರ್ಕಾರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್‌ಗೆ ಅಡಕೆ ಬೆಳೆಗಾರರ ಸಮಾವೇಶದಲ್ಲಿ ರೈತರನ್ನು ಬೆಂಬಲಿಸಲು ಅಡಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸುವಂತೆ ಮನವಿ ಮಾಡಲಾಗಿತ್ತು. ಅಲ್ಲದೇ ಪತ್ರ ಬರೆದು ಒತ್ತಾಯಿಸಲಾಗಿತ್ತು. ನಮ್ಮ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಅಡಿ ಟೆಲಿಸ್ಕೊಪಿಕ್ ಟ್ರಿ-ಪ್ರೂನರ್ ಗೆ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಅತಿ ಸಣ್ಣ ರೈತರು ಹಾಗೂ ಮಹಿಳೆಯರಿಗೆ ನೀಡಲಾಗುತ್ತಿದ್ದ ಶೇ.50 ರ ಸಹಾಯಧನ ಗರಿಷ್ಠ ಮೊತ್ತ 5 ಸಾವಿರ ರು. ಗಳಿಂದ 40 ಸಾವಿರಗಳಿಗೆ ಹೆಚ್ಚಿಸಲಾಗಿದೆ. ಅಂತೆಯೇ ಸಾಮಾನ್ಯ ವರ್ಗದ ಕೃಷಿಕರಿಗೆ ನೀಡಲಾಗುತ್ತಿದ್ದ ಶೇ.40ರ ಸಹಾಯಧನದಂತೆ ಗರಿಷ್ಠ ಮೊತ್ತ 4 ಸಾವಿರ ಗಳಿಂದ 32 ಸಾವಿರ ಗಳಿಗೆ ಹೆಚ್ಚಿಸಿ ಪರಿಷ್ಕರಿಸಿದ ಆದೇಶ ಹೊರಡಿಸಿದೆ. ಇದರಿಂದಾಗಿ ಅಡಕೆ ಬೆಳೆಗಾರರಿಗೆ ನಿರೀಕ್ಷಿತ ಸಹಕಾರ ದೊರೆತಂತಾಗಿದೆ ಎಂದು ಹೇಳಿದ್ದಾರೆ.ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆಯು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಸರಿ ಸುಮಾರು 1,37,407 ಹೆಕ್ಟೇರ್ ಪ್ರದೇಶವನ್ನು ಆವರಿಸಿಕೊಂಡಿದೆ. ಜಿಲ್ಲೆಯ ಅಡಕೆ ಬೆಳೆಗಾರರಿಗೆ ಟೆಲಿಸ್ಕೊಪಿಕ್ ಟ್ರಿ-ಪ್ರೂನರ್ ಉಪಕರಣವು ಅಡಕೆ ಕಟಾವು ಮಾಡಲು ಹಾಗೂ ಔಷಧಿ ಸಿಂಪರಣೆ ಮಾಡಲು ಅತ್ಯುಪಯುಕ್ತವಾಗಿರುವುದನ್ನು ಅರಿತು ಎಲ್ಲಾ ಅಡಕೆ ಬೆಳೆಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವ ನಿಟ್ಟಿನಲ್ಲಿ ಕೇಂದ್ರಕ್ಕೆ ಮಾಡಿದ ಮನವಿ ಸಫಲವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಕಾಲದಲ್ಲಿ ಔಷಧಿ ಸಿಂಪರಣೆ ಮಾಡುವ ನೈಪುಣ್ಯತೆವುಳ್ಳ ಕೂಲಿ ಕಾರ್ಮಿಕರ ಅಭಾವವಿರುವುದರಿಂದ ಈ ಉಪಕರಣವು ಅತ್ಯಂತ ಉಪಯುಕ್ತವಾಗಲಿದೆ. ಮಾತ್ರವಲ್ಲ ಕೂಲಿಕಾರರನ್ನು ಹುಡುಕುವುದರಿಂದ ಮುಕ್ತಿ ದೊರೆಯಲಿದೆ ಎಂದಿದ್ದಾರೆ.ಟೆಲಿಸ್ಕೊಪಿಕ್ ಟ್ರಿ-ಪ್ರೂನರ್‌ಉಪಕರಣವು ತುಕ್ಕು ರಹಿತ, ಹಗುರವಿರುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಅತಿ ಎತ್ತರಕ್ಕೆ (20 ಅಡಿಯಿಂದ 80 ಅಡಿ) ಔಷಧಿ ಸಿಂಪರಣೆ ಮಾಡುವಾಗ ಸ್ಥಿರವಾಗಿರುವುದರಿಂದ ಈ ಉಪಕರಣಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಇದರಿಂದ ಅಡಕೆ ಬೆಳೆಗಾರ ರೈತರ ಜೀವನಮಟ್ಟವು ಹೆಚ್ಚು ಆರ್ಥಿಕವಾಗಿ ಸುಭದ್ರವಾಗಲಿದೆ ಎಂದು ಹೇಳಿದ್ದಾರೆ. ನಮ್ಮ ಕೋರಿಕೆಯನ್ನು ಪುರಸ್ಕರಿಸಿ, ಅಡಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸಿ, ಆತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟುಕುವಂತೆ ಮಾಡುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಾಯಧನ ಬಿಡುಗಡೆಗೊಳಿಸಿ ಪ್ರೋತ್ಸಾಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಮತ್ತು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.