ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ, ಶಾಸಕರಿಗೆ ಮನವಿ
ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಂಜೂರು ಮಾಡಬೇಕಾದ ಸಹಾಯಧನವನ್ನು ಸರ್ಕಾರವು ಪುರಸಭೆಗೆ ಯಾವುದೇ ಮಾಹಿತಿ ನೀಡದೇ ಹಿಂಪಡೆದಿದ್ದು ಖಂಡನೀಯ ಎಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ, ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಖಂಡ ದಾವಲ ತಾಳಿಕೋಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಪಿಎಂಎಫ್‌ಎಂಇ (ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರಿಕೀಕರಣ ಯೋಜನೆ) ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಸಹಾಯಧನ ಮಂಜೂರು ಮಾಡುವ ಪ್ರಕ್ರಿಯೆಯಾಗಿದೆ. ಆದರೆ, ಸಂಬಂಧಿಸಿದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸದರಿ ಸಹಾಯಧನವನ್ನು ಮಂಜೂರು ಮಾಡಿ ವಿತರಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಸರ್ಕಾರವು ಯಾವುದೇ ಮುಂಚಿತ ಮಾಹಿತಿ ನೀಡದೆ ಪುರಸಭೆಗೆ ಬಿಡುಗಡೆ ಮಾಡಿದ್ದ ಹಣವನ್ನು ಮರಳಿ ಹಿಂಪಡೆದಿರುವುದು ತಿಳಿದು ಬಂದಿದೆ ಎಂದು ದೂರಿದರು.ಜನವಾದಿ ಮಹಿಳಾ ಸಂಘದ ಮುಖಂಡೆ ಅಕ್ಕಮ್ಮ ರಾಠೋಡ ಮಾತನಾಡಿ, ಸರ್ಕಾರದ ಯೋಜನೆಯಡಿ ಸಹಾಯಧನದ ನಿರೀಕ್ಷೆಯಲ್ಲಿದ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ತೀವ್ರ ನಿರಾಸೆಯುಂಟಾಗಿದ್ದು, ತಮ್ಮ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಹಾಗೂ ಈಗಾಗಲೇ ಕೈಗೊಂಡಿರುವ ಉದ್ಯಮ ಚಟುವಟಿಕೆಗಳನ್ನು ಮುಂದುವರಿಸಲು ಆರ್ಥಿಕ ತೊಂದರೆ ಎದುರಿಸುವಂತಾಗಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ಅವರ ಆದಾಯವನ್ನು ಹೆಚ್ಚಿಸುವುದು ಮತ್ತು ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿರುವುದರಿಂದ, ಅನುದಾನ ಹಿಂಪಡೆಯುವಿಕೆಯಿಂದ ಯೋಜನೆಯ ಉದ್ದೇಶವೇ ಹಿನ್ನಡೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಮಹಿಳಾ ಸ್ವಸಹಾಯ ಗುಂಪುಗಳ ಹಿತದೃಷ್ಟಿಯಿಂದ ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಸಲುವಾಗಿ ಈ ಮನವಿಯನ್ನು ತುರ್ತಾಗಿ ಪರಿಗಣಿಸಿ, ಹಿಂಪಡೆಯಲಾದ ಅನುದಾನವನ್ನು ಶೀಘ್ರವಾಗಿ ಮರುಮಂಜೂರು ಮಾಡಿ ಅರ್ಹ ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲುಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ೧೫ ದಿನಗಳೊಳಗೆ ಸಹಾಯಧನ ನೀಡದೆ ಇದ್ದರೆ ಪುರಸಭೆ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕಮಲವ್ವ ಮುಧೋಳ, ಚೆನ್ನಮ್ಮ ಗುರಿಕಾರ, ಮಮತಾಜ ತಾಳಿಕೋಟಿ, ಶಾರದಾ ಕಲ್ಮಶೆಟ್ಟಿ, ರೇಣಕಾ ಕರಡಿ, ಸಾವಿತ್ರಿ ಯಂಕಂಚಿ, ಬೀಬಿಜಾನ ಜಂಗ್ಲಿ, ರೇಣುಕಾ ರಾಮಜಿ, ಸುಪ್ರೀತಾ ರಾಮಜಿ, ದಾಕ್ಷಾಯಿಣಿ ಬೂದಿಹಾಳ, ದಾವಲಬಿ ನಂದಿಹಾಳ, ಈರಮ್ಮ ಟೆಂಗಿನಕಾಯಿ, ಮಂಜುಳಾ ಚಿಟಗಿ, ನಾಗಮ್ಮ ರಾಮಜಿ, ದಾವಲಬಿ ಅಬ್ಬಿಗೇರಿ ಸೇರಿ ಇತರರು ಇದ್ದರು.