ಕನ್ನಡಪ್ರಭ ವಾರ್ತೆ ಹುಣಸಗಿ (ಯಾದಗಿರಿ ಜಿಲ್ಲೆ)
ಕನ್ನಡಪ್ರಭದಲ್ಲಿ ಸೆ.4 ರಂದು ಪ್ರಕಟಗೊಂಡ ವರದಿಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು, ವಾಸ್ತವಾಂಶದ ಬಗ್ಗೆ ಆದ್ಯತೆಯ ಮೇರೆಗೆ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಆದೇಶಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪ್ರತಿ ರವಾನಿಸಲಾಗಿತ್ತು.
ಸೆ.4 ರಂದು ವರದಿ ಪ್ರಕಟಗೊಂಡ ದಿನವೇ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅರುಣಕುಮಾರ ಕ್ಯಾಂಟೀನ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿದ್ದರು. ಇಂದಿರಾ ಕ್ಯಾಂಟೀನ್‌ಗೆ ಬರುವ ಸಾರ್ವಜನಿಕರಿಗೆ ಉತ್ತಮವಾದ ಗುಣಮಟ್ಟದ ಆಹಾರ, ಕುಡಿಯುವ ನೀರು, ಸ್ವಚ್ಛತೆ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸೂಚಿಸಿ ಸದರಿ ಪ್ರಕರಣ ಕುರಿತು 24 ಗಂಟೆಗಳ ಒಳಗಾಗಿ ಪಟ್ಟಣ ಪಂಚಾಯತ್ ಕಚೇರಿಗೆ ಲಿಖಿತವಾಗಿ ವರದಿ ಸಲ್ಲಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದರಲ್ಲದೆ, ತಪ್ಪಿದ್ದಲ್ಲಿ ತಮ್ಮ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುವುದು ಎಂದು ನೋಟಿಸ್ ಮೂಲಕ ಸೂಚಿಸಿದ್ದರು. ದಿನನಿತ್ಯದ ಆಹಾರ ಮೆನು ಅಳವಡಿಸುವುದು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು, ಇನ್ನು ಮುಂದೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ಪೂರೈಸಲಾಗುತ್ತಿದೆಯೇ? ಹಿಂದಿನ ರಾತ್ರಿಯ ಅನ್ನವನ್ನು ಬಿಸಿ ಮಾಡಿ, ಹಳಸಿದ ಸಾಂಬಾರು ಜೊತೆಗೆ ಬಡವರಿಗೆ ನೀಡಲಾಗುತ್ತಿದೆಯೇ? ಇಂತಹ ಆರೋಪಗಳು ಇದೀಗ ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿವೆ. ಅಂದು ಗುರುವಾರ ಮಧ್ಯಾಹ್ನ ಆಹಾರ ಸೇವಿಸಿದ ನಾಗರಿಕರು ಕ್ಯಾಂಟೀನ್ ಅಡುಗೆ ಭಟ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಬುದಾಗಿ ಸೆ.4.ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು.
-
19ವೈಡಿಆರ್2 : ಕನ್ನಡಪ್ರಭದಲ್ಲಿ ಸೆ.4 ರಂದು ಪ್ರಕಟಗೊಂಡಿದ್ದ ವರದಿ.