ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವೇ ಜನರ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಜಾಸೇವೆ ಅಭಿಯಾನ ಮೂಲಕ ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವುದು ನಮ್ಮ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವೇ ಜನರ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಜಾಸೇವೆ ಅಭಿಯಾನ ಮೂಲಕ ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವುದು ನಮ್ಮ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಹೇಳಿದರು.ಶನಿವಾರ ಆಳಂದ ತಾಲೂಕಿನ ಮುನ್ನೊಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಹೋಬಳಿಮಟ್ಟದ ಪ್ರಜಾ ಸೇವೆ ಅಭಿಯಾನ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವ ಎಂದರು.ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 100 ದಿನಗಳ ಕಾರ್ಯಕ್ರಮದಲ್ಲಿ ಪ್ರಜಾಸೇವೆ ಹೊಸ ಇಲಾಖೆಯನ್ನು ಪ್ರಾರಂಭ ಮಾಡಿ, ಅದರ ಮೂಲಕ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಒಂದು ಹೊಸ ತಂತ್ರಾಂಶ ಸಿದ್ಧಪಡಿಸಿದ್ದಾರೆ. ಪ್ರಜಾಸೇವೆ ಎನ್ನುವಂತದ್ದು ಹಿಂದೆ ಇದ್ದಂತಹ ''''''''ಜನಸ್ಪಂದನ'''''''' ಹಾಗೂ ''''''''ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ'''''''' ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿದೆ. ಆದರೆ ಈ ಹೊಸ ಪ್ರಜಾಸೇವೆಯಲ್ಲಿನ ನೂತನ ಅಂಶವೇನೆಂದರೆ, ತಂತ್ರಜ್ಞಾನದ ಬಳಕೆ. ಪ್ರತಿಯೊಂದು ಅರ್ಜಿಗೂ ''''''''ಯುನಿಕ್ ಐಡೆಂಟಿಟಿ ಕೋಡ್'''''''' ನೀಡಿ IPGRS ತಂತ್ರಾಂಶದಲ್ಲಿ ನಮೂದಿಸಲಾಗುತ್ತದೆ. ಅರ್ಜಿಗೆ ಪರಿಹಾರ ಸಿಕ್ಕಿದೆಯೇ ಇಲ್ಲವೇ ಎಂಬುದನ್ನು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಿಂದಲೇ ಮೇಲ್ವಿಚಾರಣೆ ಮಾಡಲಾಗುತ್ತದೆ ತಿಳಿಸಿದರು.

*ಅಧಿಕಾರಿಗಳಿಗೆ ಕ್ಷೇತ್ರ ಭೇಟಿ ಸೂಚನೆ: ಸಭೆಗೆ ಮಾತ್ರ ಸೀಮಿತವಾಗದೆ ಎಲ್ಲ ಇಲಾಖೆಯ ಅಧಿಕಾರಿಗಳು ಸ್ಥಳೀಯ ಶಾಲೆಗಳು, ಆಸ್ಪತ್ರೆಗಳು, ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ರೈತರ ಮೇವಿನ ಅಭಾವ, ಜಮೀನು ಸರ್ವೇ ಹಾಗೂ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ದೂರುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸುವಂತೆ ಹಾಗೂ ಅಧಿಕಾರಿಗಳು ಸೌಜನ್ಯದಿಂದ ನಡೆದುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಗ್ರಾಮಸ್ಥರ ವಿವಿಧ ಕುಂದುಕೊರತೆಗಳ ಕುರಿತು ಮನವಿಗೆ ಸ್ಪಂದಿಸಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.*11 ಸ್ಟಾಲ್ ಸ್ಥಾಪನೆ: ಪ್ರಜಾ ಸೇವೆ ಅಂಗವಾಗಿ ತಾಲೂಕಿನ ಪಂಚಾಯಿತಿವಾರು ಸಂಬಂಧಿಸಿದಂತೆ 11 ಸ್ಟಾಲ್ ತೆರೆದು ಆನ್ ಲೈನ್ ಮೂಲಕ ಸಾರ್ವಜನಿಕರ ಅರ್ಜಿಗಳು ಸ್ವೀಕರಿಸಲಾಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್, ಎಸ್.ಐ.ಆರ್, ವಿಬಿ-ಜಿ-ರಾಮ್ ಜಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ, ಆಹಾರ, ಜೆಸ್ಕಾಂ, ಯುವ ನಿಧಿ, ಸಹಕಾರ ಸಹಿತ ಪ್ರಮುಖ ಇಲಾಖೆಗಳ ಸ್ಟಾಲ್ ತೆರೆದು ಇಲಾಖೆ ಯೋಜನೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.ಜಿಲ್ಲಾ ಪಂಚಾಯಿತಿ ಸಿ.ಇ.ಓ ರಾಹುಲ್ ಎಸ್. ಸಂಕನೂರ ಮಾತನಾಡಿ, ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ತೋಡಿಕೊಳ್ಳಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು, ಜಿಲ್ಲಾ ಮಟ್ಟದ ಅಧಿಕಾರಿಗಳೇ ಸ್ವತಃ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಿರದೆ, ಸಾರ್ವಜನಿಕರಿಗೆ ನೈಜ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಹೇಳಿದರು.

ಒಟ್ಟು 52 ಅರ್ಜಿಗಳು ಇದುವರೆಗೆ ಸ್ವೀಕೃತಗೊಂಡಿದ್ದವು. ಸಾರ್ವಜನಿಕರು ನೀಡಿದ ಅರ್ಜಿಗಳನ್ನು ಪರಿಶೀಲಿಸಿ, ತಕ್ಷಣವೇ ಬಗೆಹರಿಸಬಹುದಾದ ಸರಳ ಸಮಸ್ಯೆಗಳಿಗೆ ಇಂದೇ ಸ್ಥಳದಲ್ಲೇ ಪರಿಹಾರ ಒದಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹೆಚ್ಚಿನ ಸಮಯ ಹಾಗೂ ಕಾಲಾವಕಾಶ ಅಗತ್ಯವಿರುವ ಸಂಕೀರ್ಣ ಸಮಸ್ಯೆಗಳಿಗೆ, ಶೀಘ್ರದಲ್ಲೇ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಸ್ಟಾಲ್‍ಗಳ ಮೂಲಕ ಸಾರ್ವಜನಿಕರಿಗೆ ಇಲಾಖಾವಾರು ಯೋಜನೆಗಳ ಮಾಹಿತಿ ಒದಗಿಸುವುದರ ಜತೆಗೆ, ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು

ಆಳಂದ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಕಲಬುರಗಿ ಉಪವಿಭಾಗದ ಸಹಾಯಕ ಅಯುಕ್ತೆ ರೀತಿಕಾ ವರ್ಮಾ, ಸಾಮಾಜಿಕ ಉಪ ಸಂರಕ್ಷಣಾಧಿಕಾರಿ ಸಾಗರ ತಾವಡೆ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಢವಳಗಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಡಿ. ಎಚ್. ಓ. ಶರಣಬಸಪ್ಪ ಕ್ಯಾತನಾಳ, ಆಳಂದ ತಹಸೀಲ್ದಾರ ಅಣ್ಣಾರಾವ ಪಾಟೀಲ್, ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಸಹಿತ ಸಾರ್ವಜನಿಕರು, ಗ್ರಾಮ ಪಂಚಾಯಿತಿಯ ಸದಸ್ಯರು ಭಾಗವಹಿಸಿದ್ದರು.