ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ದೇವರಮಲ್ಲನಾಯ್ಕನಹಳ್ಳಿ ಹೊರವಲಯದಲ್ಲಿ 16.8ಕೋಟಿ ರು. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಬೆಳ್ಳೂರು ಹಾಗೂ ವಿವಿಧ ಗ್ರಾಮಗಳಲ್ಲಿ 35 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯ ಪ್ರತಿ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಹಾಗೂ ನಾನು ಶಾಸಕ ಮತ್ತು ಸಚಿವನಾಗಿದ್ದ ಅವಧಿಯಲ್ಲಿ ಸಾಕಷ್ಟು ಶ್ರಮಿಸುತ್ತಿದ್ದೇನೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿಗೆ 30 ವಸತಿ ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ಮಂಜೂರು ಮಾಡಿಸಿ ಕಟ್ಟಡವನ್ನೂ ನಿರ್ಮಿಸಿಕೊಟ್ಟಿದ್ದೇನೆ. ನಮಗಿರುವ ಜವಾಬ್ದಾರಿ ಅರಿತು ತಾಲೂಕು ಮತ್ತು ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಕಾರ್ಯ ಮಾಡುತ್ತಿದ್ದೇವೆ ಎಂದರು.ಈ ಹಿಂದೆ ಐದು ವರ್ಷ ಶಾಸಕರಾಗಿದ್ದವರು ಹೋಬಳಿಯ ಯಾವುದಾದರೊಂದು ಹಳ್ಳಿಯಲ್ಲಿ ಹಾಳಾಗಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದರೆ ಹೇಳಲಿ. ಮೈಲಾರಪಟ್ಟಣ ರಸ್ತೆ ಅಭಿವೃದ್ಧಿ ಪಡಿಸಲಿಲ್ಲ. ಕೋಟೆಬೆಟ್ಟಕ್ಕೆ ನಿಂತಿದ್ದ ರಸ್ತೆಯನ್ನು ನಲ್ಕುಂದಿವರೆಗೆ ಮುಂದುವರಿಸಲಿಲ್ಲ. ಬಿಂಡೇನಹಳ್ಳಿಯಲ್ಲಿ ಅರ್ಧಕ್ಕೆ ನಿಂತಿದ್ದ ರಸ್ತೆಯನ್ನು ಭೀಮನಹಳ್ಳಿ ವರೆಗೆ ಅಭಿವೃದ್ಧಿಪಡಿಸಲಿಲ್ಲ. ಈ ಭಾಗದಲ್ಲಿ ಹಲವು ವರ್ಷಗಳಿಂದ ಶಿಥಿಲಗೊಂಡಿದ್ದ ಸೇತುವೆಗಳನ್ನು ಅಭಿವೃದ್ಧಿಪಡಿಸಲಿಲ್ಲ. ಶಾಸಕ, ಸಚಿವರಾಗುವುದು ಜನರ ಸೇವೆ ಮಾಡಲಿಕ್ಕೆ ಹೊರತು ಕೇವಲ ರಾಜಕಾರಣ ಮಾಡುವುದಕ್ಕಲ್ಲ. ಜನರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.
ಅಂತರ್ಜಲ ಕುಸಿತದಿಂದ ಕೆರೆ ಕಟ್ಟೆ ಬಾವಿಗಳಲ್ಲಿ ನೀರು ಬತ್ತಿಹೋಗುತ್ತಿದೆ. ಮುಂದಿನ ಜೂನ್ ತಿಂಗಳ ವರೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಯಾವ ರೀತಿ ನಿಭಾಯಿಸಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಬೆಳ್ಳೂರು ಹೋಬಳಿ ಹಟ್ಣ ಗ್ರಾಮದಲ್ಲಿ 20ಲಕ್ಷ ರು. ವೆಚ್ಚದ ರಸ್ತೆ ಅಭಿವೃದ್ಧಿ. ದೇವಲಾಪುರ ಹೋಬಳಿ ದೊಡ್ಡಚಿಕ್ಕನಹಳ್ಳಿ 3 ಕೋಟಿ ರು. ವೆಚ್ಚದ ಕೆರೆ ಅಭಿವೃದ್ಧಿ, ರಾಮೇನಹಳ್ಳಿ 5 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ, ದೇವರ ಮಲ್ಲನಾಯ್ಕನಹಳ್ಳಿ 16.8ಕೋಟಿ ರು. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ನಿರ್ಮಾಣ, ದೇವಲಾಪುರ ಗ್ರಾಮದಲ್ಲಿ 3 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ, ಮದ್ದೇನಹಟ್ಟಿ ಗ್ರಾಮದಲ್ಲಿ 5 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರು.
ಈ ವೇಳೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.