ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಹೊತ್ತು ತನ್ನ ಬಳಿ ಬರದಂತೆ ಗಮನ ಹರಿಸಬೇಕು. ತ್ವರಿತವಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು. ಸಭೆಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಕಾನೂನು ಪ್ರಕಾರ ಶೀಘ್ರ ವಿಲೇವಾರಿಗೆ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ನನ್ನ ಬಳಿ ಅರ್ಜಿ ಹಿಡಿದು ಬರುತ್ತಿದ್ದಾರೆ. ಇದರಿಂದ ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗದೇ ತಲೆತಗ್ಗಿಸುವಂತಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಬೇಸರ ವ್ಯಕ್ತಪಡಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ತಾಲೂಕು ಕಂದಾಯ ಇಲಾಖೆ, ವಿವಿಧ ಇಲಾಖೆಯೊಂದಿಗೆ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನಾದ ಮೊದಲ ಸಭೆಯಲ್ಲಿ ಜನರು ಹೋಬಳಿಯಿಂದ ಬರಪೂರ್ಣ ಸಮಸ್ಯೆಗಳನ್ನು ತಂದು ಶಾಸಕರ ಗಮನಕ್ಕೆ ತಂದಾಗ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಹೊತ್ತು ತನ್ನ ಬಳಿ ಬರದಂತೆ ಗಮನ ಹರಿಸಬೇಕು. ತ್ವರಿತವಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು. ಸಭೆಯಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಕಾನೂನು ಪ್ರಕಾರ ಶೀಘ್ರ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಶ್ರೇಯಸ್ ಮಾತನಾಡಿ, ಪ್ರಜಾಸೇವೆ ಸಭೆಯಿಂದ ಜನರ ಸಮಸ್ಯೆಗೆ ತ್ವರಿತ ಪರಿಹಾರ ಸಿಗಲಿದೆ. ಹಂತ ಹಂತವಾಗಿ ಆದ್ಯತೆ ಮೇರೆ ಎಲ್ಲರ ಸಮಸ್ಯೆ ಪರಿಹರಿಸಲಾಗುವುದು. ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಎಂದರು.

ಹೇಮಾವತಿ ನೀರಾವರಿ ಇಲಾಖೆ ಎಇಇ ಸುಧಾ ಈಗಾಗಲೇ ಕೆರೆಗಳನ್ನು ನಾಲೆ ಮೂಲಕ ಕ್ರಮವಹಿಸಲಾಗಿದೆ. ಕಿಕ್ಕೇರಿ ಕೆ.ಎಸ್.ನ. ಸರೋವರ ತುಂಬಿ ಕೆಳಪಾತ್ರದಲ್ಲಿನ ಚೌಡೇನಹಳ್ಳಿ ಅಣೆಕಟ್ಟಿಗೆ ನೀರು ಹರಿಯುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದರು. ಹೋಬಳಿಯ ಬಹುತೇಕ ಕೆರೆಕಟ್ಟೆಗಳು ನೀರಿಲ್ಲದೆ ಬಣಗುಟ್ಟುತ್ತಿವೆ. ಬಿದರಹಳ್ಳಿ, ಗಂಗೇನಹಳ್ಳಿಯಂತಹ ಹಲವು ಕೆರೆ, ಕಟ್ಟೆ ತುಂಬಿಸಬೇಕು. ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ತಿನ್ನಲು ಮೇವಿಲ್ಲದಂತಾಗಿದೆ ಎಂದು ರೈತ ಬಸವರಾಜು ಅಳಲು ತೋಡಿಕೊಂಡರು.

ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಅನುಭವಿ ವೈದ್ಯರಿಲ್ಲ. ರೋಗಿಗಳ ತಪಾಸಣೆಗೆ ತೊಂದರೆಯಾಗಿದೆ. ಬಡರೋಗಿಗಳು ಮಧುಮೇಹ ತಪಾಸಣೆ ಮಾಡಿಸಲು ಖಾಸಗಿ ಲ್ಯಾಬ್‌ಗಳಿಗೆ ಸಿಬ್ಬಂದಿಗಳು ಕಳಿಸುತ್ತಾರೆ. ರಾತ್ರಿ ವೇಳೆ ವೈದ್ಯರಿಲ್ಲದೆ ಸಾವು ನೋವು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ದೂರಿದರು.

ಸಾರ್ವಜನಿಕ ಸ್ಮಶಾನವಿಲ್ಲ. ಅಂತ್ಯಕ್ರಿಯೆ ಮಾಡಲು ಪರದಾಡಬೇಕಿದೆ. ಬಸ್‌ನಿಲ್ದಾಣದ ಬಳಿ ಗುಡಿಸಲು ನಿವಾಸಿಗಳಿಗೆ ನೆಮ್ಮದಿಯಾಗಿ ಬದುಕಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು. ತ್ಯಾಜ್ಯ ವಿಲೇವಾರಿ ಮಾಡಲು ಗ್ರಾಮದಿಂದ ಹೊರವಲಯದಲ್ಲಿ ಸ್ಥಳ ನಿಗದಿಪಡಿಸಬೇಕು. ಗಬ್ಬು ವಾಸನೆ ಸಹಿಸದಾಗಿದೆ. ಖಾಸಗಿ ಕ್ಲಿನಿಕ್‌ನವರು ಅಪಾಯಕಾರಿ ಸಿರೆಂಜ್‌ಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ. ನಿಜ್ಞಾನಿಕವಾಗಿ ವಿಲೇವಾರಿ ಮಾಡಿಸಿ ಎಂದು ನಿವೇದಿಸಿಕೊಂಡರು.

ಊಗಿನಹಳ್ಳಿ ಕಾರೆಮೆಳೆ ಸಿಂಗಮ್ಮ ಗುಡಿ ಬಳಿ ನೆಡಲಾಗಿದ್ದ ಗಿಡಗಳನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ. ಹಲವು ಪ್ರಭಾವಿಗಳು ಅಮಾಯಕರ ವಿರುದ್ಧ ದೂರು ನೀಡಲು ಅನುಸೂಚಿತ ಸಮುದಾಯದವರನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣ ನಡೆಯುತ್ತಿವೆ. ಹೋಬಳಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ, ಹಗಲು ರಾತ್ರಿ ಚಿರತೆ ಹಾವಳಿ ಕಾಡುತ್ತಿದೆ. ನೀರಿಲ್ಲದೆ ರೈತರು ಬೆಳೆ ಬೆಳೆಯಲಾಗುತ್ತಿಲ್ಲ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಜನರು ಅಳಲನ್ನು ತೋಡಿಕೊಂಡರು.

ಈ ವೇಳೆ ತಾಪಂ ಇಒ ಸುಷ್ಮಾ, ಉಪತಹಸೀಲ್ದಾರ್ ವೀಣಾ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.