ಪಟ್ಟಣ ಪಂಚಾಯಿತಿಗೆ ೧೦- ೧೫ ಕೋಟಿ, ಪುರಸಭೆಗೆ ೨೦ ಕೋಟಿ, ನಗರಸಭೆಗೆ ೩೦ ಕೋಟಿ: ಸಚಿವ ಎಚ್.ಸಿ.ಬಾಲಕೃಷ್ಣ ಘೋಷಣೆ
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡಲು ತೀರ್ಮಾನಿಸಿದ್ದು, ಪಟ್ಟಣ ಪಂಚಾಯಿತಿಗಳಿಗೆ ರು. ೧೦ ರಿಂದ ೧೫ ಕೋಟಿ, ಪುರಸಭೆಗಳಿಗೆ ರು. ೨೦ ಕೋಟಿ ಹಾಗೂ ನಗರಸಭೆಗಳಿಗೆ ರು. ೩೦ ಕೋಟಿ ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಘೋಷಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕೋಲಾರ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಅನುದಾನಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ, ಸರ್ಕಾರದಿಂದ ರು. ೪೦ ಕೋಟಿ ವಿಶೇಷ ಅನುದಾನ ತಂದರೂ ಎಸ್ಟಿಮೇಟ್ ಮತ್ತು ಟೆಂಡರ್ ಅನುಮೋದನೆಗಾಗಿ ಬೆಂಗಳೂರಿನ ಕಚೇರಿಗಳಿಗೆ ಒಂದೂವರೆ ವರ್ಷದಿಂದ ಅಲೆಯುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಲಾರ, ಮಾಲೂರು ಮತ್ತು ಬಂಗಾರಪೇಟೆಗೆ ನೀರು ಪೂರೈಸುವ ೫೦೦ ಎಂಸಿಎಫ್‌ಟಿ ಸಾಮರ್ಥ್ಯದ ಯರಗೋಳ್ ಜಲಾಶಯದಲ್ಲಿ ಸದ್ಯ ೧೩೦ ಎಂಸಿಎಫ್‌ಟಿ ನೀರು ಮಾತ್ರ ಲಭ್ಯವಿದ್ದು, ಇನ್ನೂ ೨-೩ ತಿಂಗಳಿಗೆ ಮಾತ್ರ ಸಾಕಾಗಲಿದೆ. ಜಲಾಶಯದ ನಿರ್ವಹಣೆಗೆ ವಾರ್ಷಿಕ ರು. ೯ ಕೋಟಿ ವಿಶೇಷ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಯರಗೋಳ್ ನಿರ್ವಹಣೆಗೆ ವಿಶೇಷ ಗಮನ ಹರಿಸಲಾಗುವುದು ಎಂದರು.
ಕೋಲಾರ ನಗರದಲ್ಲಿ ರೂ.೬೦ ಕೋಟಿ ವೆಚ್ಚದ ಯುಜಿಡಿ ಕಾಮಗಾರಿ, ಮಾಲೂರಿನಲ್ಲಿ ರೂ.೩೩ ಕೋಟಿ ವೆಚ್ಚದ ಅಮೃತ್ ೨.೦ ಕುಡಿಯುವ ನೀರಿನ ಯೋಜನೆ (ಶೇ.೫೫ ಪ್ರಗತಿ) ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ಕೆ.ಯು.ಐ.ಡಿ.ಎಫ್.ಸಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ, ಮುಳಬಾಗಿಲಿನಲ್ಲಿ ೨೦೧೪-೧೫ನೇ ಸಾಲಿನ ರೂ.೨೭ ಕೋಟಿ ಯೋಜನೆಯಡಿ ಕೊರೆಯಲಾದ ೮೦ ಬೋರ್‌ವೆಲ್‌ಗಳು ಮತ್ತು ಪಂಪ್ ಮೋಟಾರುಗಳ ಸ್ಥಿತಿಗತಿ ಬಗ್ಗೆ ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ಆದೇಶಿಸಿದರು.
ಕೋಲಾರದಲ್ಲಿ ನಿತ್ಯ ೬೫ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಎಂಆರ್‌ಎಫ್ ಘಟಕ ಶೇ.೭೫ ಪೂರ್ಣಗೊಂಡಿದೆ. ಆದರೆ, ೪೫ ಸಾವಿರ ಟನ್ ಹಳೆ ಕಸ (ಲೆಗೆಸಿ ವೇಸ್ಟ್) ವಿಲೇವಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಇ-ಖಾತಾ ಹಾಗೂ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ’ದಾಖಲೆ ಲಭ್ಯವಿಲ್ಲ’ ಎಂಬ ನೆಪವೊಡ್ಡಿ ಅನಗತ್ಯವಾಗಿ ತಿರಸ್ಕರಿಸದೆ, ಅಧಿಕಾರಿಗಳೇ ದಾಖಲೆ ಹುಡುಕಿ ಜನರಿಗೆ ನೆರವಾಗುವಂತೆ ಸೂಚಿಸಲಾಯಿತು.
ಸಭೆಯ ಅಂತ್ಯದಲ್ಲಿ ಕೋಲಾರ ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್, ನಗರದ ಎಸ್‌ಎನ್‌ಆರ್ ಆಸ್ಪತ್ರೆ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಕಸ ವಿಲೇವಾರಿಗೆ ೩೦ ವರ್ಷ ಹಳೆಯ ವಾಹನ ಬಳಕೆ, ನಕಲಿ ಮರಣ ಪ್ರಮಾಣಪತ್ರ ವಿತರಣೆ ಹಾಗೂ ರೂ.೪,೦೦೦ ಮೌಲ್ಯದ ಕ್ಯಾಮೆರಾಗೆ ರೂ.೧.೭೦ ಲಕ್ಷ ಬಿಲ್ ಮಾಡಿರುವ ಅವ್ಯವಹಾರದ ಕುರಿತು ಕೋಲಾರ ಪೌರಾಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಎಂಎಲ್ಸಿ ಅನಿಲ್ ಕುಮಾರ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎಲ್.ರವೀಂದ್ರ, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಇದ್ದರು.