ಅಜ್ಞಾನದ ನಿವಾರಣೆಗೆ ಸೂಕ್ಷ್ಮವಾದ ಜ್ಞಾನ ಅವಶ್ಯಕ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork |  
Published : Jul 30, 2026, 02:45 AM IST
ಗುರು ಎಂದರೆ ಅಜ್ಞಾನವನ್ನು ನಿವಾರಿಸುವವನು. ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ಗುರು ಭಕ್ತಿಯು ಜಾಗೃತಗೊಳ್ಳುವ ದಿನವೇ ವ್ಯಾಸಪೂರ್ಣಿಮೆ ಎಂದರು | Kannada Prabha

ಸಾರಾಂಶ

ಅಜ್ಞಾನದ ನಿವಾರಣೆಗೆ ಸೂಕ್ಷ್ಮವಾದ ಜ್ಞಾನ ಅವಶ್ಯಕ. ಇಂಥ ಸೂಕ್ಷ್ಮ ಜ್ಞಾನ ನೀಡುವವನೇ ಗುರು.

ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ೩೬ನೇ ಚಾತುರ್ಮಾಸ ವ್ರತಾಚರಣೆ ಸಂಕಲ್ಪದ ಧರ್ಮಸಭೆ

ಕನ್ನಡಪ್ರಭ ವಾರ್ತೆ ಶಿರಸಿ

ಅಜ್ಞಾನದ ನಿವಾರಣೆಗೆ ಸೂಕ್ಷ್ಮವಾದ ಜ್ಞಾನ ಅವಶ್ಯಕ. ಇಂಥ ಸೂಕ್ಷ್ಮ ಜ್ಞಾನ ನೀಡುವವನೇ ಗುರು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ‌ ನುಡಿದರು.

ಬುಧವಾರ ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ೩೬ನೇ ಚಾತುರ್ಮಾಸ ವ್ರತಾಚರಣೆ ಸಂಕಲ್ಪದ ಧರ್ಮಸಭೆಯ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.

ಗುರು ಎಂದರೆ ಅಜ್ಞಾನವನ್ನು ನಿವಾರಿಸುವವನು. ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ಗುರು ಭಕ್ತಿಯು ಜಾಗೃತಗೊಳ್ಳುವ ದಿನವೇ ವ್ಯಾಸಪೂರ್ಣಿಮೆ ಎಂದರು.ಗುರು ಪೂರ್ಣಿಮೆ ಎಂದರೆ ವ್ಯಾಸ ಪೂರ್ಣಿಮೆ. ವ್ಯಾಸ ಮಹರ್ಷಿಗೆ ಮೊದಲ ಪೂಜೆ. ಬ್ರಹ್ಮ-ವಿಷ್ಣು-ಮಹೇಶ್ವರರು ಗುರು ಪರಂಪರೆಯಲ್ಲಿ ಆದಿಯಾಗಿ ನಿಲ್ಲುತ್ತಾರೆ. ನಾಲ್ಕು ಪಕ್ಷಗಳ ಕಾಲ ಚಾತುರ್ಮಾಸ್ಯ ಆಚರಣೆ ಬಹುತೇಕ ಮಠಗಳಲ್ಲಿ ನಡೆಯುತ್ತದೆ ಎಂದರು.ಆಧುನಿಕ ಮಾನವ ವೈಜ್ಞಾನಿಕವಾಗಿ ಓಡುತ್ತಿದ್ದಾನೆ. ಇಂದಿನ ಕೃತಕ ಬುದ್ಧಿಮತ್ತೆ ವೈಜ್ಞಾನಿಕ ಅಜ್ಞಾನಕ್ಕೆ ಜ್ವಲಂತ ಉದಾಹರಣೆಯಾಗಿದೆ. ಮನುಷ್ಯ ಕೃತಕ ಬುದ್ಧಿಮತ್ತೆಯಿಂದ ತನ್ನ ಆಲಸ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇದೊಂದು ತುಂಬಾ ಆತಂಕಕಾರಿ ಸಂಗತಿ. ಅಜ್ಞಾನದ ಪರಾಕಾಷ್ಠೆಯನ್ನು ನಾವು ಕೃತಕ ಬುದ್ಧಿಮತ್ತೆಯಲ್ಲಿ ಕಾಣಬಹುದು ಎಂದರು‌.ನದಿ ತಿರುವು ಯೋಜನೆಯೇ ಈಗ ದಿನದಿಂದ ದಿನಕ್ಕೆ ತಿರುವು ತೆಗೆದುಕೊಳ್ಳುತ್ತಿದೆ. ನಾವು ನಮ್ಮ ಧ್ವನಿಯನ್ನು ಗಟ್ಟಿಯಾಗಿಸಬೇಕು. ಮತ್ತು ಈ ಹೋರಾಟ ನಿರಂತರವಾಗಿರಬೇಕು ಎಂದ ಶ್ರೀಗಳು, ನದಿ ತಿರುವು ಪದೇ ಪದೆ ತಿರುವು ಪಡೆಯುತ್ತಿದೆ. ಚಾತುರ್ಮಾಸ್ಯ ಅವಧಿಯಲ್ಲಿ ಪತ್ರ ಚಳವಳಿಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಮಠದ ಕಿರಿಯ ಶ್ರೀ ಆನಂದಭೋದೇಂದ್ರ ಸರಸ್ವತಿ ಮಹಾಸ್ವಾಮೀಜಿ ೩ನೇ ಚಾತುರ್ಮಾಸ್ಯ‌ ಸಂಕಲ್ಪಿಸಿ ಆಶೀರ್ವಚನ ನುಡಿದು, ಗುರುಗಳ ಅನುಗ್ರಹ ಆಗಬೇಕು. ಗುರುತತ್ವ ಮೂರ್ತವೆತ್ತು‌ ನಮ್ಮೆದುರು ಬಂದಿದೆ. ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮ ಸಾಧನೆ ಸಾಗುತ್ತಿದೆ ಎಂದರು.

ಸನ್ಮಾನ ಸ್ವೀಕರಿಸಿದ ಐಪಿಎಸ್ ಅಧಿಕಾರಿ, ಡಿಜಿಪಿ ನರಸಿಂಹ ಕೋಮಾರ, ಸಣ್ಣ ಊರಿನಿಂದ ದೊಡ್ಡ ಕನಸಿನೊಂದಿಗೆ ಊರು ಬಿಟ್ಟೆವು. ಗುರುಗಳ ಶಕ್ತಿಯಿಂದ ಈ ಸಾಧನೆ ಸಾಧ್ಯವಾಗಿದೆ. ಭೂಮಿ ಭಾರವಾಗದೇ ಸಾಧನೆ ಮಾಡಬೇಕು ಎಂದು ತಂದೆ ಹೇಳುತ್ತಿದ್ದರು. ಆ ಮಾತು ಸಾಧನೆಗೆ ಪ್ರೇರಣೆ ಆಗಿದೆ ಎಂದರು.

ಮಠದ ಪುರೋಹಿತ ನರಸಿಂಹ ಜೋಶಿ, ಹಿರಿಯ ಸಾಹಿತಿ ವನರಾಗ್ ಶರ್ಮಾ ಮಾತನಾಡಿದರು.ರಾಜರಾಜೇಶ್ವರಿ ಮಹಾ‌ ಪಾಠಶಾಲೆ ವಿಧ್ಯಾರ್ಥಿಗಳು ವೇದ ಘೋಷ ಮಾಡಿದರು. ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ವಿ.ಶಂಕರ ಭಟ್ಟ, ಗೀತಾ ಹೆಗಡೆ, ಕೆ.ವಿ. ಭಟ್ಟ ಸನ್ಮಾನ ಪತ್ರ ವಾಚಿಸಿದರು. ನದಿ ತಿರುವಿನ ಜಾಗೃತಿ ಅಭಿಯಾನದ ಕುರಿತು ಅನಂತ ಅಶೀಸರ ಮಾತನಾಡಿದರು. ಡಾ.‌ ಮಹಾಬಲೇಶ್ವರ ಭಟ್ಟ ಕಿರಕುಂಭತ್ತಿ ನಿರ್ವಹಿಸಿದರು. ಜಿ.ವಿ. ಹೆಗಡೆ ಗೊಡ್ವೆಮನೆ ವಂದಿಸಿದರು. ಇದೇ ವೇಳೆ ಹಲವು ಗ್ರಂಥಗಳ ಲೋಕಾರ್ಪಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಭಜನಾ ಮಂದಿರ ಸಮೀಪ ಕಡಲ್ಕೊರೆತ ಆರ್ಭಟ ತೀವ್ರ
ಪಕ್ಷ ಬಲಪಡಿಸಲು ‘ಸಂಘಟನ್ ಸೃಜನ್’ ಅಭಿಯಾನ: ಜಯಂತ್