ವ್ಯಾಸಪೂಜೆ ಮೂಲಕ ಗೋಕರ್ಣ ಮಂಡಲಾಚಾರ್ಯರ ೩೩ನೇ ವರ್ಷದ ಚಾತುರ್ಮಾಸ ವ್ರತದೀಕ್ಷೆಕನ್ನಡಪ್ರಭ ವಾರ್ತೆ ಗೋಕರ್ಣ
ಅಶೋಕೆಯ ಮೂಲಮಠದ ಪರಿಸರದಲ್ಲಿ ಬುಧವಾರ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಆಶೀರ್ವಚನ ಅನುಗ್ರಹಿಸಿದ ಶ್ರೀಗಳು, ಶಂಕರಾಚಾರ್ಯರು ಸೈನ್ಯ ಹಾಗೂ ಸಂಪತ್ತು ಯಾವುದೂ ಇಲ್ಲದೇ ದೇಶದಲ್ಲಿ ಧರ್ಮಸಂರಕ್ಷಣೆಯ ಕಾರ್ಯ ಮಾಡಿದರು. ದೇಶಾದ್ಯಂತ ಸಂಚರಿಸಿದ ಶಂಕರರು ಜನರಿಗೆ ಸರಿಯಾದ ದಾರಿಯನ್ನು ತೋರಿದರು ಹಾಗೂ ನಿತ್ಯನಿರಂತರವಾಗಿ ಆ ಕಾರ್ಯ ನಡೆಯುವಂತೆ ಮಾಡಲು ದೇಶಾದ್ಯಂತ ಮಠಗಳನ್ನು ಸ್ಥಾಪಿಸಿದರು. ಹಾಗಾಗಿ ಶಂಕರಾಚಾರ್ಯರ ಉದ್ದೇಶವೇ ಮಠದ ಉದ್ದೇಶವಾಗಿರಬೇಕು. ಶಂಕರರು ತೋರಿದ ದಾರಿಯಲ್ಲಿ ಧರ್ಮ ಪ್ರಸಾರವನ್ನು ಮಾಡುತ್ತಾ, ಸಮಾಜಕ್ಕೆ ಸರಿ - ತಪ್ಪುಗಳನ್ನು ಮಾರ್ಗದರ್ಶನ ಮಾಡುವುದು ಮಠದ ಕಾರ್ಯವಾಗಬೇಕು. ನಮ್ಮ ಮಠದ ಉದ್ದೇಶ ಹಾಗೂ ಈ ಅನ್ನಬ್ರಹ್ಮ ಚಾತುರ್ಮಾಸ್ಯದ ಉದ್ದೇಶವೂ ಇದೇ ಆಗಿದೆ. ಜೀವನಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಮಠದ ಕಾರ್ಯ ಎಂದು ಅನ್ನಬ್ರಹ್ಮ ಚಾತುರ್ಮಾಸ್ಯದ ಉದ್ದೇಶ ತಿಳಿಸಿದರು.
ಸಮಾಜಕ್ಕೆ ಸರಿಯಾದ ವಿಚಾರ ತಿಳಿಸುವವರಿಗೆ ಶತೃಗಳು ಹುಟ್ಟಿಕೊಳ್ಳುವುದು ಪ್ರಕೃತಿ ಸಹಜ. ಸರಿದಾರಿಯಲ್ಲಿ ನಡೆಯುವವರು ಅವುಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ರಾಮ - ಕೃಷ್ಣರಿಂದ ಆರಂಭಿಸಿ, ಎಲ್ಲಾ ಮಹಾತ್ಮರ ಜೀವನದಲ್ಲೂ ಕಾಣಬಹುದು.ಕಳೆದ ವರ್ಷ ಮಾತು ಅಥವಾ ಭಾಷೆಗೆ ಸಂಬಂಧಿಸಿದ ಸ್ವಭಾಷಾ ಚಾತುರ್ಮಾಸ್ಯ ಮಾಡಲಾಗಿತ್ತು ಹಾಗೂ ಈ ವರ್ಷ ತಿನ್ನುವ ಆಹಾರಕ್ಕೆ ಸಂಬಂಧಿಸಿದ ''''''''ಅನ್ನಬ್ರಹ್ಮ ಚಾತುರ್ಮಾಸ್ಯ'''''''' ಆಚರಿಸಲಾಗುತ್ತಿದೆ. ಹೀಗೆ ಈ ವರ್ಷ ಹಾಗೂ ಕಳೆದ ವರ್ಷದ ಚಾತುರ್ಮಾಸ್ಯಗಳೆರಡೂ ನಾಲಿಗೆಗೆ ಸಂಬಂಧಿಸಿದ್ದಾಗಿದೆ. ನಾಲಿಗೆಗೆ ಸಂಬಂಧಿಸಿದ ತಪ್ಪುಗಳನ್ನು ತಿದ್ದುವ ಕಾರ್ಯ ಇದಾಗಿದೆ ಎಂದರು.ಇಂದು ಗೌಣವಾದ ವಿಚಾರಗಳು ಮುಖ್ಯವಾಗುತ್ತಿದೆ. ಮುಖ್ಯ ವಿಚಾರಗಳು ಗೌಣವಾಗುತ್ತಿದೆ. ಇದು ಈ ಕಾಲದ ದುರಂತ ಎಂದ ಶ್ರೀಗಳು, ಇಂದು ನಾವು ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೇ? ಆಹಾರವನ್ನು ಹೇಗೆ ತಯಾರಿಸಲಾಗಿದೆ? ಎಂಬ ಕುರಿತು ಆಲೋಚಿಸದೇ ಕೇವಲ ತುತ್ತಿನ ಚೀಲವನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆಹಾರದ ಕುರಿತಾಗಿ ಸಮರ್ಪಕವಾದ ಮಾಹಿತಿಯನ್ನು ಶಾಲೆಯಲ್ಲಗಲಿ, ವಿಶ್ವವಿದ್ಯಾಲಯಗಳಾಗಲಿ ತಿಳಿಸಿಕೊಡುತ್ತಿಲ್ಲ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಹಾಗಾಗಿ ನಾವೇ ಆಹಾರದ ಕುರಿತಾದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್., ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶಾಸನತಂತ್ರ ಹಾಗೂ ಎಲ್ಲಾ ಮಂಡಲಗಳ ಪದಾಧಿಕಾರಿಗಳು, ಚಾತುರ್ಮಾಸ್ಯದ ನಿರ್ವಾಹಕರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಭಾಗಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಾಸ ಮಂತ್ರಾಕ್ಷತೆ ಸ್ವೀಕರಿಸಿದರು.