ಸಬರ್ಬನ್‌ ರೈಲು: ದೊಡ್ಡಜಾಲ ಮೂಲಕ ಏರ್‌ಪೋರ್ಟ್‌ ಸಂಪರ್ಕಿಸಲು ಯೋಜನೆ

KannadaprabhaNewsNetwork | Updated : May 07 2024, 09:37 AM IST

ಸಾರಾಂಶ

ಮೆಜೆಸ್ಟಿಕ್‌ನಿಂದ ದೇವನಹಳ್ಳಿ ಸಂಪರ್ಕಿಸುವ ಉಪನಗರ ರೈಲಿನ ಮೊದಲ ‘ಸಂಪಿಗೆ’ ಮಾರ್ಗವನ್ನು ಬಳ್ಳಾರಿ ರಸ್ತೆಯ ಏರ್‌ಪೋರ್ಟ್‌ ಟ್ರಂಪೆಟ್ ಇಂಟರ್‌ಚೇಂಜ್‌ನ ಬದಲಾಗಿ ದೊಡ್ಡಜಾಲದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲು ಯೋಜಿಸಿದೆ.

 ಬೆಂಗಳೂರು :  ಮೆಜೆಸ್ಟಿಕ್‌ನಿಂದ ದೇವನಹಳ್ಳಿ ಸಂಪರ್ಕಿಸುವ ಉಪನಗರ ರೈಲಿನ ಮೊದಲ ‘ಸಂಪಿಗೆ’ ಮಾರ್ಗವನ್ನು ಬಳ್ಳಾರಿ ರಸ್ತೆಯ ಏರ್‌ಪೋರ್ಟ್‌ ಟ್ರಂಪೆಟ್ ಇಂಟರ್‌ಚೇಂಜ್‌ನ ಬದಲಾಗಿ ದೊಡ್ಡಜಾಲದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ಯೋಜಿಸಿದೆ.

ಕೆ-ರೈಡ್ ಈ ಮೊದಲು ಏರ್‌ಪೋರ್ಟ್‌ ಟ್ರಂಪೆಟ್ ಇಂಟರ್‌ಚೇಂಜ್‌ನಿಂದ ವಿಮಾನ ನಿಲ್ದಾಣದವರೆಗೆ 5.6 ಕಿಮೀ ರಸ್ತೆ ನಿರ್ಮಿಸಲು ನಿರ್ಧರಿಸಿತ್ತು. ಇದೀಗ ದೊಡ್ಡಜಾಲದಿಂದ 8 ಕಿಮೀ ರೈಲ್ವೇ ಮಾರ್ಗ ನಿರ್ಮಿಸಿ ಆ ಮೂಲಕ ವಿಮಾನ ನಿಲ್ದಾಣ ತಲುಪುವ ಕುರಿತು ಚಿಂತನೆ ನಡೆಸಿದೆ. ಜತೆಗೆ ಬೇಗೂರು ರಸ್ತೆ ಮತ್ತು ಬಿ.ಕೆ.ಹಳ್ಳಿ ರಸ್ತೆ ಜಂಕ್ಷನ್‌ಗೆ ಸಮೀಪ ನಿಲ್ದಾಣ ನಿರ್ಮಿಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಟ್ರಂಪೆಟ್‌ ಇಂಟರ್‌ಚೇಂಜ್‌ ಮಾರ್ಗಕ್ಕೆ ಹೋಲಿಸಿದರೆ, ದೊಡ್ಡಜಾಲ ಮಾರ್ಗದ ಮೂಲಕ ವಿಮಾನ ನಿಲ್ದಾಣದ ಸಂಪರ್ಕ ಮಾರ್ಗ ಹೆಚ್ಚು ಪ್ರಯೋಜನವಾಗಲಿದೆ. ಈ ಮಾರ್ಗದಿಂದ ಸ್ಥಳೀಯರು, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಡಿಫೆನ್ಸ್‌ ಮತ್ತು ಏರೋಸ್ಪೇಸ್‌ ಪಾರ್ಕ್, ವಿಮಾನ ನಿಲ್ದಾಣದ ದಕ್ಷಿಣ ಭಾಗದ ಹಳ್ಳಿಗಳು ಮತ್ತು ವಸತಿ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸಹಾಯವಾಗಲಿದೆ. ಹೊಸ ನಿಲ್ದಾಣಕ್ಕೆ ಸಂಪರ್ಕಿಸಲು ಕೈಗಾರಿಕಾ ಕೇಂದ್ರಗಳಿಗೆ ಫೀಡರ್‌ ಬಸ್‌ ಸಂಪರ್ಕ ಕಲ್ಪಿಸಿದರೆ ಜನರಿಗೆ ಸಹಾಯವಾಗಲಿದೆ. ಇದರಿಂದ ಜನರು ನಗರಕ್ಕೆ ಬಂದು ಹೋಗಲು ಈ ಮಾರ್ಗ ಅನುಕೂಲಕರವಾಗಲಿದೆ. ಈ ಬಗ್ಗೆ ದೊಡ್ಡಜಾಲದ ಸುತ್ತಲ ಪ್ರದೇಶಗಳಿಗೆ ಉಪನಗರ ರೈಲು ಸಂಪರ್ಕ ಕಲ್ಪಿಸುವುದರಿಂದ ಆಗುವ ಪ್ರಯೋಜನದ ಕುರಿತು ಕಾರ್ಯಸಾಧ್ಯತೆ ವರದಿಯನ್ನೂ ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋದ ನೀಲಿ ಮಾರ್ಗಕ್ಕೆ ಅನುಗುಣವಾಗಿ ವಿಮಾನ ನಿಲ್ದಾಣದ ಕ್ಯಾಂಪಸ್‌ನಲ್ಲಿ ಬಿಎಂಆರ್‌ಸಿಎಲ್‌ ನಿಲ್ದಾಣ ರೂಪಿಸಲಿದ್ದು, ಉಪನಗರ ರೈಲ್ವೇ ನಿಲ್ದಾಣವೂ ಕೂಡ ಇದಕ್ಕೆ ಹೊಂದಿಕೊಂಡಿರಲಿದೆ.

ಒಟ್ಟಾರೆ 41ಕಿಮೀ ಉದ್ದದ ‘ಸಂಪಿಗೆ’ ಮಾರ್ಗ 18.9 ಕಿಮೀ ಎತ್ತರಿಸಿದ ಮಾರ್ಗದಲ್ಲಿ (ಎಲಿವೆಟೆಡ್‌) ಸಾಗಲಿದ್ದು, 22.4 ಕಿಮೀ ನೆಲಮಟ್ಟದಲ್ಲಿ ಹಾದುಹೋಗಲಿದೆ. ಉಪನಗರ ರೈಲ್ವೇ ಅನುಷ್ಠಾನದ ಹೊಣೆ ಹೊತ್ತಿರುವ ಕೆ-ರೈಡ್‌ ಆದ್ಯತೆ ಮೇರೆಗೆ ಈ ಮಾರ್ಗದ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಬೇಕು ಎಂದು ನಗರ ಸಾರಿಗೆ ತಜ್ಞರು ಒತ್ತಾಯಿಸಿದ್ದಾರೆ.

Share this article