ಕೇಂದ್ರದಿಂದ ಸಾಕಷ್ಟು ಯೋಜನೆ ತರುವಲ್ಲಿ ಯಶಸ್ವಿ: ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Apr 13, 2024, 01:02 AM IST
೧೨ಕೆ.ಎಸ್.ಎ.ಜಿ.೨ | Kannada Prabha

ಸಾರಾಂಶ

ಸಾಗರ ನಗರ ಮಂಡಲ ವತಿಯಿಂದ ಪ್ರಬುದ್ಧರೊಂದಿಗೆ ಸಂಸದರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭವಾರ್ತೆ ಸಾಗರ

ಕಾಂಗ್ರೆಸ್ ಪಕ್ಷ ೬೭ ವರ್ಷಗಳ ಕಾಲ ಆಡಳಿತ ಮಾಡಿದ್ದರೂ ದೇಶವಾಸಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವಲ್ಲಿ ಯಶಸ್ಸು ಕಂಡಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ೧೦ ವರ್ಷದಲ್ಲಿ ಭಾರತದ ಪ್ರಜೆಗಳು ಸ್ವಾಭಿಮಾನದ ಜೊತೆಗೆ ವಿಶ್ವಗುರುವಾಗಿ ಭಾರತ ಹೊರಹೊಮ್ಮುತ್ತಿದೆ ಎಂದು ಸಂಸದ ಹಾಗೂ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ನೆಹರೂ ಮೈದಾನದಲ್ಲಿ ಗುರುವಾರ ಸಂಜೆ ಬಿಜೆಪಿ ಸಾಗರ ನಗರ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಬುದ್ಧರೊಂದಿಗೆ ಸಂಸದರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಡತನವನ್ನು ಪ್ರೀತಿ ಮಾಡಿದ್ದು ಬಿಟ್ಟರೆ ಬಡವರನ್ನು ಪ್ರೀತಿ ಮಾಡಿಲ್ಲ. ನಿಜವಾಗಿಯೂ ಬಡವರನ್ನು ಕಾಂಗ್ರೆಸ್ ಪಕ್ಷ ಗಮನಿಸಿದ್ದರೆ ಆಡಳಿತ ನಡೆಸಿದ ೬೭ ವರ್ಷದಲ್ಲಿ ಬಡತನ ಸಂಪೂರ್ಣ ನಿರ್ಮೂಲನೆಯಾಗಬೇಕಾಗಿತ್ತು ಎಂದರು.

ನರೇಂದ್ರ ಮೋದಿಯವರು ಆಡಳಿತ ನಡೆಸಿದ ೧೦ ವರ್ಷಗಳ ಅಂಕಿ ಅಂಶವನ್ನು ನೋಡಿದರೆ ದೇಶದ ಅಭಿವೃದ್ಧಿಪಥ ಅರ್ಥವಾಗುತ್ತದೆ. ೨೦೪೭ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು ೧೦೦ ವರ್ಷ ತುಂಬಲಿದ್ದು, ಮೋದಿಯವರ ದೂರದರ್ಶಿತ್ವ ಯೋಜನೆಗೆ ಈಗಿನಿಂದಲೇ ಚಾಲನೆ ಸಿಕ್ಕಿದೆ. ಅಭಿವೃದ್ಧಿ ಜೊತೆಗೆ ಹಿಂದುತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವ ಹೆಗ್ಗಳಿಕೆ ಕೇಂದ್ರ ಸರ್ಕಾರದ್ದಾಗಿದೆ. ಪ್ರಪಂಚದಲ್ಲಿ ಅನೇಕ ಧರ್ಮಗಳು ಅವನತಿ ಹೊಂದಿದೆ. ಭಾರತದಲ್ಲಿಯೂ ಹಿಂದುತ್ವದ ಮೇಲೆ ಸಾಕಷ್ಟು ಆಕ್ರಮಣ ನಡೆದಿದೆ. ಆದರೆ ಕಳೆದ ಹತ್ತು ವರ್ಷದಲ್ಲಿ ಹಿಂದುತ್ವವನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಇಡೀ ವಿಶ್ವವೇ ಭಾರತದ ಅಭಿವೃದ್ಧಿ ವೇಗವನ್ನು ಗಮನಿಸುವಂತೆ ಆಗಿದೆ. ನಾನು ಸಂಸದನಾಗಿ ಕೇಂದ್ರದಿಂದ ಸಾಕಷ್ಟು ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ಇನ್ನಷ್ಟು ಯೋಜನೆಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲಿದ್ದು, ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ವಾಗ್ಮಿ ರವೀಂದ್ರ ಜೋಷಿ ಮಾತನಾಡಿ, ಭಾರತ ದೇಶದ ನಾಡಿಮಿಡಿತನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಭಾರತ ತನ್ನ ಸನಾತನ ಶಕ್ತಿಯಿಂದ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ. ಪ್ರಬುದ್ಧರು ಮತ್ತು ಕೆನೆಪದರ ಜನರು ಶಹಬ್ಬಾಸ್ ಎಂದಾಗ ಮಾತ್ರ ಓರ್ವ ಪ್ರಧಾನಿ ಯಶಸ್ವಿಯಾಗಿದ್ದಾನೆ ಎನ್ನು ವುದನ್ನು ಅರಿತುಕೊಳ್ಳಬೇಕು. ಅಂತಹ ಶಹಬ್ಬಾಸ್‌ಗಿರಿಗೆ ನರೇಂದ್ರ ಮೋದಿಯವರು ಪಾತ್ರವಾಗಿದ್ದಾರೆ. ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ನಾಗಲೋಟ ದಲ್ಲಿದೆ. ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಮ್ಮ ಮೃದು ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ಅಭಿವೃದ್ಧಿಯಲ್ಲೂ ದೇಶದ ಸಂಸದರ ಪೈಕಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಉಪಸ್ಥಿತರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌