ಮತದಾರರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ: ಎಚ್.ಡಿ. ತಮ್ಮಯ್ಯ

KannadaprabhaNewsNetwork | Updated : May 16 2024, 12:23 PM IST

ಸಾರಾಂಶ

ಚಿಕ್ಕಮಗಳೂರು, ಕಾಂಗ್ರೆಸ್‌ ಪಕ್ಷ ಜನಪರವಾದ ಯೋಜನೆಗಳ ಮೂಲಕ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

  ಚಿಕ್ಕಮಗಳೂರು :  ಕಾಂಗ್ರೆಸ್‌ ಪಕ್ಷ ಜನಪರವಾದ ಯೋಜನೆಗಳ ಮೂಲಕ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಚುನಾವಣೆ ಬಳಿಕ ಚಿಕ್ಕಮಗಳೂರು ಮತ್ತು ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್‌ ಸಮಿತಿಗಳ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಬಿಜೆಪಿ ಬೆಲೆ ಇಳಿಸುತ್ತೇವೆಂದು ಸುಳ್ಳು ಭರವಸೆ ಕೊಟ್ಟು ಬೆಲೆಯನ್ನೂ ಇಳಿಸದೆ ನಿಯಂತ್ರಣ ಮಾಡಲಾಗದೆ ಕಳೆದ 10 ವರ್ಷಗಳ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆಂದು ಹೇಳಿದ್ದಾರೆ. ಅದು, ಸಾಧ್ಯವಿಲ್ಲ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಜಿಲ್ಲೆಯಲ್ಲಿ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು ಶಾಶ್ವತ ವಾಗಿರಬೇಕಾದರೆ ಜನರ ಮನಸ್ಸನ್ನು ಗೆಲ್ಲುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರ ಪರಿಶ್ರಮ ಅಗತ್ಯ ಎಂದು ಕಿವಿ ಮಾತು ಹೇಳಿದರು.ಚುನಾವಣೆ ಬಳಿಕ ಸಮಾಲೋಚನಾ ಸಭೆ ನಡೆಸಿದರೆ, ಹೋಬಳಿವಾರು, ಕ್ಷೇತ್ರವಾರು ಇಂತಿಷ್ಟು ಮತಗಳಿಕೆಯಾಗಿದೆ ಎಂಬ ನಿಖರ ಲೆಕ್ಕ ಸಿಗುತ್ತದೆ. 

ಜಾಗರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಚುನಾಣೆಯಲ್ಲಿ ಒಂದು ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾದರೆ ಶೇ.90 ರಷ್ಟು ಮತ ಕಾಂಗ್ರೆಸ್ ಪಕ್ಷಕ್ಕೆ ಲಭ್ಯವಾಗಲಿದೆ. ಮುಂದೆ ಇದೇ ಮಾದರಿ ಯನ್ನು ಮುಂದುವರಿಸುವುದಾಗಿ ತಿಳಿಸಿದರು.ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನ ಮತ ಚಲಾಯಿಸಬೇಕೆಂದು ತೀರ್ಮಾನಿಸಿದ್ದರು. ಈ ನಿಟ್ಟಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮನವಿ ಮಾಡಿದ್ದೇವೆಂದು ಹೇಳಿದರು.

ಮುಂದಿನ ನೈಋತ್ಯ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಇದೇ ರೀತಿ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಕರೆ ನೀಡಿದ ಅವರು, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಅಭ್ಯರ್ಥಿಯನ್ನಾಗಿಸಿದ ನಂತರ ಅವರ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿದರೆ ಅವರು ಗೆದ್ದು ಪಕ್ಷದ ಆಸ್ತಿಯಾಗುತ್ತಾರೆಂದು ಭರವಸೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯಿತ್ರಿ ಶಾಂತೇಗೌಡ ಮಾತನಾಡಿ, ಚುನಾವಣೆಗಳು ಬಂದರೆ ಬಿಜೆಪಿ ಯವರೇ ಗೆಲ್ಲುತ್ತಾರೆ ಎಂಬ ಅಸಡ್ಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮುಖಂಡರಲ್ಲಿ ಇತ್ತು. ಆದರೆ, ಕಳೆದ ವಿಧಾನ ಸಭಾ ಚುನಾವಣೆಯನ್ನು ಛಲ, ಪರಿಶ್ರಮದಿಂದ ದುಡಿದಿದ್ದಕ್ಕೆ ಜಿಲ್ಲೆಯ ಐದು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರ ಗೆಲುವಿಗೆ ಸಹಕಾರಿಯಾಯಿತು ಎಂದು ಹೇಳಿದರು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರು.ಗಳ ಅನುದಾನ ನೀಡಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಜನರ ಆಶೋತ್ತರಗಳನ್ನು ಈಡೇರಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಮಾತನಾಡಿ, ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಭರವಸೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಜಾರಿ ಮಾಡಿ ಅನುಷ್ಠಾನಗೊಳಿಸಿ ಮುಖಂಡರಿಗೆ, ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಿದ್ದಾರೆಂಬುದನ್ನು ಅತ್ಯಂತ ಸಂತೋಷದಿಂದ ಹೇಳಲು ಬಯಸುತ್ತೇನೆಂದರು.

ಕಾರ್ಯಕ್ರಮದಲ್ಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ. ಮಂಜೇಗೌಡ, ಮಹಡಿಮನೆ ಸತೀಶ್, ಮುಖಂಡರಾದ ಎಂ.ಎಲ್. ಮೂರ್ತಿ, ಎಚ್.ಎಚ್‌. ದೇವರಾಜ್ ಮಾತನಾಡಿದರು. ವೇದಿಕೆಯಲ್ಲಿ ಡಾ.ಡಿ.ಎಲ್. ವಿಜಯಕುಮಾರ್, ಎಂ.ಸಿ. ಶಿವಾನಂದಸ್ವಾಮಿ, ಕೆ.ಮಹಮದ್, ರೇಖಾ ಹುಲಿಯಪ್ಪಗೌಡ, ಅತೀಕ್‌ ಖೈಸರ್, ಸೈಯದ್‌ ಹನೀಫ್, ನಯಾಜ್‌ ಅಹಮದ್, ಪ್ರವೀಣ್‌ ಬೆಟ್ಟಗೆರೆ, ಎಂ.ಡಿ.ಅಕ್ಬರ್, ಜಮ್‌ಶಿದ್‌ಖಾನ್, ಇಂದಾವರ ಲೋಕೇಶ್, ಸುಮಂತ್, ಎಂ.ಡಿ.ರಮೇಶ್, ಶಿವರಾಮ್ ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಮುನೀರ್‌ ಅಹಮದ್ ಸ್ವಾಗತಿಸಿದರು.ಪೋಟೋ ಫೈಲ್‌ ನೇಮ್ 15 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಬ್ಲಾಕ್ ಕಾಂಗ್ರೆಸ್‌ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯಮಾತನಾಡಿದರು. ಗಾಯತ್ರಿ ಶಾಂತೇಗೌಡ, ಡಾ. ಡಿ.ಎಲ್‌. ವಿಜಯಕುಮಾರ್‌, ಡಾ. ಅಂಶುಮಂತ್‌, ಎಚ್‌.ಎಚ್‌. ದೇವರಾಜ್‌, ರೇಖಾ ಹುಲಿಯಪ್ಪಗೌಡ, ಮಂಜೇಗೌಡ ಇದ್ದರು.

Share this article