ಕನ್ನಡಪ್ರಭ ವಾರ್ತೆ ಮೈಸೂರು
ಪಾರಿವಾಳಗಳು ನಗರದ ಪಾರಂಪರಿಕ ಕಟ್ಟಡಗಳಲ್ಲಿ ಗೂಡು ಕಟ್ಟಿ ಅಲ್ಲಿಯೇ ಹಿಕ್ಕೆ ಹಾಕುವುದರಿಂದ ಕಟ್ಟಡಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ನಾಗರಿಕರ ಸಭೆ, ಸಂವಾದದ ಯಶಸ್ವಿಯಾಗಿ ಹಲವು ದಿನಗಳಿಂದ ಪರ-ವಿರೋಧಕ್ಕೆ ಎಡೆಮಾಡಿಕೊಟ್ಟಿದ್ದ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸುವಲ್ಲಿ ಯಶಸ್ವಿಯಾಯಿತು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪಾರಂಪರಿಕ ಕಟ್ಟಡ ತಜ್ಞರು ಮತ್ತು ನಗರದ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಇತಿಹಾಸ ತಜ್ಞ ಪ್ರೊ.ಎನ್.ಎಸ್. ರಂಗರಾಜು ಮಾತನಾಡಿ, ಪಾರಿವಾಳಗಳ ಹಿಕ್ಕೆಯಿಂದ ಸುತ್ತಮುತ್ತಲಿನ ಪ್ರತಿಮೆಗಳು, ಅರಮನೆಗೆ ತೊಂದರೆಯಾಗುತ್ತಿದೆ. ಪಾರಿವಾಳಗಳಿಗೆ ಅರಮನೆ ಮುಂಭಾಗ ಆಹಾರ ನೀಡುವುದನ್ನು ನಿಲ್ಲಿಸಬೇಕು. ಇಕ್ಕೆಯಿಂದ ಬಿಡುಗಡೆಯಾಗುವ ಯೂರಿಕ್ ಆಸಿಡ್ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂದರು.
ಮೊದಲು ಪಾರಿವಾಳಗಳು ಮುನ್ನೂರಷ್ಟು ಇತ್ತು. ಆಹಾರ ನೀಡುವುದು ಹೆಚ್ಚಾದ ಮೇಲೆ ಈಗ ಮೂರು ಸಾವಿರಕ್ಕೂ ಹೆಚ್ಚು ಇವೆ. ಪ್ರತಿಮೆಗಳ ಬಳಿ ಹೆಗ್ಗಣಗಳು ಬಿಲ ತೋಡಿವೆ. ಏನಾದರೂ ಪಾರಿವಾಳ ಸತ್ತು ಹೋದರೆ ಅದನ್ನು ತಿನ್ನಲು ಹೆಗ್ಗಣಗಳು ಬಿಲ ತೋಡಲಿವೆ. ಅಂದಾಜು 300 ಬಿಲಗಳನ್ನು ಮಾಡಿಕೊಂಡಿವೆ. ಇಕ್ಕೆಯಿಂದ ದೊಡ್ಡ ಸಮಸ್ಯೆಯಾಗಲಿದೆ ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಅರಮನೆಯ ಬಳಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸಬೇಕು. ಬೇಕಾದರೆ ಅವರ ಮನೆ ಮುಂದೆ ಸಾಕಿ ಆಹಾರ ಹಾಕಲಿ. ಒಂದು ವೇಳೆ ಕಾಳು ಹಾಕುವುದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಂವಾದದ ಕೊನೆಯಲ್ಲಿ ಮಾತನಾಡಿದ ಖಬೂತರ್ ದಾನ್ ಜೈನ್ ಸಂಘಟನೆ ಮುಖ್ಯಸ್ಥ ವಿನೋದ್ ಮಾತನಾಡಿ, ನಾಳೆಯಿಂದ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸುತ್ತೇವೆ. ಈಗಾಗಲೇ ಪ್ರತಿಯೊಬ್ಬರೂ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಪಾರಿವಾಳಗಳಿಂದ ಅರಮನೆ, ಪ್ರತಿಮೆಗಳಿಗೆ ಆಗುತ್ತಿರುವ ಹಾನಿ ಬಗ್ಗೆ ಹೇಳಿರುವುದರಿಂದ ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಸೋಮವಾರದಿಂದ ಕಾಳು ಹಾಕುವುದನ್ನು ನಿಲ್ಲಿಸುತ್ತೇವೆ ಎಂದು ಘೋಷಿಸಿದರು.