ನಾಪೋಕ್ಲು: ಕಠಿಣ ಪರಿಶ್ರಮ ಶಿಸ್ತು ಹಾಗೂ ಸಮಯ ನಿರ್ವಹಣೆಯಿಂದ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ಎಂದು ಬದಿಯಡ್ಕದ ಕುನಿಲ್ ಎಜುಕೇಶನ್ ಇನ್ ಸ್ಟಿಟ್ಯೂಟ್ ನ ಸಿಇಒ ವಿಕ್ರಂ ದತ್ ಹೇಳಿದರು.ರೋಟರಿ ಮಿಸ್ಟಿ ಹೀಲ್ಸ್ ಮಡಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ನಾಪೋಕ್ಲು ಸಹಯೋಗದೊಂದಿಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ವೃದ್ಧಿಗಾಗಿ ಶುಕ್ರವಾರ ಇಲ್ಲಿಯ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೇರಣ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಮುಖ್ಯ ಅಲ್ಲ. ಜ್ಞಾನ, ಅನುಭವ ತ್ಗಳಿಸಿಕೊಳ್ಳುವುದು ಅಗತ್ಯ. ಜೀವನದಲ್ಲಿ ನಾನೇನು ಆಗಬೇಕು. ಮುಂದಿನ ಭವಿಷ್ಯದ ಬಗ್ಗೆ ಈಗಲೇ ನಿರ್ಧರಿಸಕೊಳ್ಳಬೇಕಿದೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಐದು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಂವಹನ ಕಲೆ, ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ವೇಗವಾಗಿ ಕಲಿಕೆ ಇದು ಇಂದಿನ ಅಗತ್ಯಗಳು ಎಂದರು. ಶಿಕ್ಷಕರಿಗಿಂತ ಉತ್ತಮ ಗೈಡ್ ಬೇರೆ ಇಲ್ಲ. ಶಿಕ್ಷಕರೊಂದಿಗೆ ಸಂವಹನ ಮಾಡಿ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಒಂದು ಹಬ್ಬವಾಗಿ ಸಂಭ್ರಮಿಸಬೇಕು ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್‍ಯದರ್ಶಿ ಬಿ.ಕೆ. ಕಾರ್ಯಪ್ಪ, ಕೆ.ಎಂ. ಶರತ್, ಪಿ.ಎಸ್. ರವಿಕೃಷ್ಣ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲರಾದ ಶಿವಣ್ಣ, ಇಸಿಒ ಜಾನೆಟ್, ಕೆಪಿಎಸ್ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅತಿಥಿ ಗಣ್ಯರು ಗಿಡಕ್ಕೆ ನೀರುಣಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಾಯಿತು.ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಉಷಾರಾಣಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ ಮಹೇಶ್ ಸ್ವಾಗತಿಸಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸುವ ರೀತಿನಲ್ಲಿ ಸಫಲವಾಯಿತು. ಕರ್ನಾಟಕ ಪಬ್ಲಿಕ್ ಶಾಲೆ, ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ನೇತಾಜಿ ಪ್ರೌಢಶಾಲೆ, ಪ್ರೌಢಶಾಲೆ ಕಕ್ಕಬೆ, ಎಮ್ಮೆಮಾಡು ಸರಕಾರಿ ಪ್ರೌಢಶಾಲೆ ಸೇರಿದಂತೆ 15 ವಿವಿಧ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.